Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

07:41 PM Dec 08, 2022 | Team Udayavani |

ಬೆಂಗಳೂರು: ರಾಜ್ಯದಲ್ಲೂ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಗುಜರಾತ್‌ ಫ‌ಲಿತಾಂಶದ ನಂತರ ದೇಶದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇರಬೇಕೆಂಬ ವಿಚಾರಕ್ಕೆ ಮತದಾರರು ಮುದ್ರೆ ಒತ್ತಿದ್ದಾರೆ. ಕರ್ನಾಟಕದಲ್ಲೂ ಅದೇ ಫ‌ಲಿತಾಂಶ ಮರುಕಳಿಸಲಿದೆ ಎಂದು ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್‌ ಹೆಸರು ಹೇಳುವವರು ಇರುವುದಿಲ್ಲ. ಭಾರತ್‌ ಜೋಡೋ ಯಾತ್ರೆಯಿಂದ ರಾಹುಲ್‌ಗಾಂಧಿ ಗಡ್ಡ ಬೆಳೆದಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ ಎಂದು ಲೇವಡಿ ಮಾಡಿದರು.

ಭಾರತ್‌ ಜೋಡೋ  ಕಾಂಗ್ರೆಸ್‌ ಚೋಡೋ ಯಾತ್ರೆಯಾಗಿ ಪರಿವರ್ತನೆಯಾಗಿದೆ. ಸೋನಿಯಾಗಾಂಧಿ ಅವರಿಗೆ ಅವರದೇ ಆದ ಸಮಸ್ಯೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಯಸ್ಸಾಗಿದ್ದು ಹೆಸರಿಗೆ ಕೂರಿಸಿದ್ದಾರೆ. ರಾಹುಲ್‌ಗಾಂಧಿಯೂ ಬಲವಂತಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಅವರ ನಾಯಕತ್ವಕ್ಕೆ ದೇಶದ ಜನರ ಬೆಂಬಲ ಇದೆ. ಗುಜರಾತ್‌ ಫ‌ಲಿತಾಂಶ ನಮ್ಮ ರಾಜ್ಯದ ಕಾರ್ಯಕರ್ತರಿಗೆ ಬೂಸ್ಟರ್‌  ನೀಡಲಿದೆ. ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಪ್ರೇರಣೆಯೂ ಆಗಲಿದೆ ಎಂದು ಬಣ್ಣಿಸಿದರು.

Advertisement

ಕಾಂಗ್ರೆಸ್‌ನ ಹಲವಾರು ನಾಯಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್‌ ಜಗಳ. ನಮಗೆ ದಿಕ್ಕು ಕಾಣದಾಗಿದೆ  ಎಂದು ಹೇಳಿಕೊಂಡಿದ್ದಾರೆ. ಆಮ್‌ ಆದ್ಮಿ ಪಾರ್ಟಿ ಕಾಂಗ್ರೆಸ್‌ ಅನ್ನು ಮುಳುಗಿಸುವ ಪಕ್ಷ. ಗುಜರಾತ್‌ನಲ್ಲಿ ಕಾಂಗ್ರೆಸ್‌ ಮತಗಳನ್ನು ಆಪ್‌ ಪಡೆದಿದೆ. ರಾಜ್ಯದಲ್ಲೂ ಇದು ಆಗಲಿದೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ವಂಶ ರಾಜಕಾರಣ ಇಲ್ಲ. ಒಂದು ಕುಟುಂಬದ ಆಳ್ವಿಕೆಯೂ ಇಲ್ಲ. ರಾಜ್ಯದಲ್ಲಿ ಕೆಲವೊಮ್ಮೆ ಅನಿವಾರ್ಯವಾಗಿ ಒಂದೆರಡು ಕಡೆ ಅವಕಾಶ ನೀಡಲಾಗಿದೆ. ಆದರೆ, ಸಾಮಾನ್ಯ ಕಾರ್ಯಕರ್ತರಿಗೆ ನಾಯಕತ್ವ ಕೊಡುವ ಪಕ್ಷ ಬಿಜೆಪಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next