Advertisement

ಪೌತಿ ಖಾತೆ ಅಭಿಯಾನಕ್ಕೆ ತೀರ್ಮಾನ: ಜು. 16ರಿಂದ ಅಭಿಯಾನ ನಡೆಸಲು ತೀರ್ಮಾನ: ಆರ್‌. ಅಶೋಕ್‌

11:55 PM Jun 22, 2022 | Team Udayavani |

ಬೆಂಗಳೂರು: ಕೃಷಿಕರ ಕುಟುಂಬಗಳಲ್ಲಿ ಮೃತರ ಹೆಸರಿನಲ್ಲಿರುವ ಭೂದಾಖಲೆಗಳನ್ನು ಹಾಲಿ ವಾರಸುದಾರರಿಗೆ ಪೌತಿ ಖಾತೆ ಮೂಲಕ ಮಾಡಿಕೊಡುವ ಅಭಿಯಾನ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಪೌತಿ ಖಾತೆಗಳಿಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ಕಾಲಾನುಕಾಲಕ್ಕೆ ಆಸ್ತಿ ವಾರಸುದಾರರಿಗೆ ವರ್ಗಾವಣೆ ಆಗದ ಸಮಸ್ಯೆಯಾಗುತ್ತಿದೆ. ಹೀಗಾಗಿ, ಜು. 16ರಿಂದ ಅಭಿಯಾನ ನಡೆಸಲು ಸರಕಾರ ನಿರ್ಧರಿಸಿದೆ ಎಂದು ಹೇಳಿದರು.

ಪೌತಿ ಖಾತೆ ವರ್ಗಾವಣೆ ಆಗದೆ ಇರುವುದರಿಂದ ಕೇಂದ್ರ-ರಾಜ್ಯ ಸರಕಾರಗಳಿಂದ ಲಭ್ಯವಾಗುವ ಹಣಕಾಸು ನೆರವು ರೈತರು ಪಡೆಯಲಾಗುತ್ತಿಲ್ಲ. ಜತೆಗೆ ಸಾಲ ಪಡೆಯುವ ಕೆಲಸಕ್ಕೂ ಅಡ್ಡಿಯಾಗುತ್ತಿದೆ. ಹೀಗಾಗಿ, ಇದಕ್ಕೆ ಪರಿಹಾರ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿಗಳಿಗೆ ಹೊಣೆ
ಗ್ರಾಮ ವಾಸ್ತವ್ಯದ ಕಾಲದಲ್ಲೇ ಪೌತಿ ಖಾತೆಗಳನ್ನು ಇತ್ಯರ್ಥಪಡಿಸಲು ನಿರ್ಧರಿಸಲಾಗಿದ್ದು, ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ನಡೆಸಲಿರುವ ಗ್ರಾಮ ವಾಸ್ತವ್ಯದ ಸಂದರ್ಭ ಈ ಯೋಜನೆಗೆ ಚಾಲನೆ ದೊರೆಯಲಿದೆ. ಉಪ ವಿಭಾಗಾಧಿಕಾರಿಗಳಿಗೆ ಪೌತಿ ಖಾತೆ ಒದಗಿಸುವ ಸ್ವಾತಂತ್ರ್ಯ ನೀಡಲಾಗುವುದು.

ಮೃತರ ಹೆಸರಿನಲ್ಲಿರುವ ಪೌತಿ ಖಾತೆಗಳನ್ನು ವರ್ಗಾಯಿಸುವಾಗ ಅವರ ಮಕ್ಕಳು, ಸೊಸೆಯರು, ಮೊಮ್ಮಕ್ಕಳ ವಿವರವನ್ನು ಸ್ಥಳೀಯರಿಂದ ಖಚಿತಪಡಿಸಿಕೊಳ್ಳಲಾಗುವುದು. ಗ್ರಾಮ ವಾಸ್ತವ್ಯ ಸಂದರ್ಭ ಪೌತಿ ಖಾತೆ ಅಭಿಯಾನ ಮಾಡಿದರೆ ಕುಟುಂಬಸ್ಥರ ಗುರುತಿಸುವಿಕೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

Advertisement

“ಭಾರ’ವಾಗಿರುವ ನಿಗಮ ಮುಚ್ಚುವ ಚಿಂತನೆ
ಬೊಕ್ಕಸಕ್ಕೆ ಭಾರವಾಗಿರುವ ನಿಗಮಗಳನ್ನು ಮುಚ್ಚುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ. ಕೆಲವು ಇಲಾಖೆಗಳ ನಿಗಮ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ. ಒಂದೊಂದು ಇಲಾಖೆಯಲ್ಲಿ ನಾಲ್ಕೈದು ನಿಗಮಗಳಿದ್ದು, ಬಹುತೇಕ ನಿಗಮಗಳಿಗೆ ಮಾಡಲು ಕೆಲಸವೇ ಇಲ್ಲ. ಇಂತಹ ನಿಗಮಗಳನ್ನು ಮುಚ್ಚಲಾಗುವುದು. ಸಮಾಜ ಕಲ್ಯಾಣ ಸೇರಿ ಪ್ರಮುಖ ಇಲಾಖೆಗಳ ನಿಗಮಗಳನ್ನು ಮುಂದುವರಿಸಲಾಗುವುದು. ಯೋಜನ ಪ್ರಾಧಿಕಾರಗಳ ಸಂಖ್ಯೆಯೂ ಹೆಚ್ಚಾಗಿದ್ದು, ಜಿಲ್ಲೆಗೊಂದೇ ಪ್ರಾಧಿಕಾರ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಅಶೋಕ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next