Advertisement

ಪುಣ್ಯಕೋಟಿ ದತ್ತು ಯೋಜನೆ ಯಶಸ್ವಿಗೊಳಿಸಲು ಸಚಿವ ಪ್ರಭು ಚವ್ಹಾಣ್ ಕರೆ

04:48 PM Aug 21, 2022 | Team Udayavani |

ಬೆಂಗಳೂರು: ಗೋಸಂಕುಲವನ್ನು ರಕ್ಷಿಸಲು ರಾಜ್ಯ ಸರ್ಕಾರ‌ ಜಾರಿಗೆ ತಂದಿರುವ ಪುಣ್ಯ ಕೋಟಿ ದತ್ತು ಯೋಜನೆ ಯಶಸ್ವಿಗೊಳಿಸಲು ಪಶುಸಂಗೋಪನೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಮುಂದಾಗಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಕರೆ‌ ನೀಡಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಸದಾ ಒತ್ತು ನೀಡುತ್ತಾ ಬಂದಿರುವ ಪಶುಸಂಗೋಪನೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು, ಪುಣ್ಯಕೋಟಿ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮರ್ಪಕ ಅನುಷ್ಟಾನಕ್ಕೆ ಮುಂದಾಗಿ ವೈಯಕ್ತಿಕವಾಗಿ ದತ್ತು ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದಂದು 11 ಗೋವುಗಳನ್ನು ದತ್ತು ಪಡೆದು ಗೋಸಂಕುಲ ಸಂರಕ್ಷಣೆಗೆ ಕರೆ ನೀಡಿ ಎಲ್ಲರಿಗೂ ಮಾದರಿಯಾದರು. ಸರ್ಕಾರ 2022-23ನೇ ಸಾಲಿನ ಆಯವ್ಯಯದಲ್ಲಿ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದಿತು. ನಾನು ಇದರಿಂದ ಆಕರ್ಷಿತನಾಗಿ ಜಿಲ್ಲೆಗೊಂದರಂತೆ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ 31 ಗೋವುಗಳನ್ನು ದತ್ತು ಪಡೆದಿದ್ದೇನೆ. ಗೋಮಾತಾ ಸಂರಕ್ಷಣೆಗೆಂದೇ ವಿಶೇಷ-ವಿಶಿಷ್ಠ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದೇ ವೇಳೆ ಪ್ರಭು ಚವ್ಹಾಣ್ ಕೃತಜ್ಞತೆ ಸಲ್ಲಿಸಿದ್ದಾರೆ.

ಗೋ ಶಾಲೆಗಳಲ್ಲಿರುವ ಜಾನುವಾರುಗಳ ನಿರ್ವಹಣೆ ಮಾಡಲು ಮತ್ತು ರಾಜ್ಯದ ಗೋಶಾಲೆಗಳನ್ನು ಆತ್ಮನಿರ್ಭರವಾಗಿಸುವ ಸಲುವಾಗಿ ಪುಣ್ಯಕೋಟಿ ದತ್ತು ಯೋಜನೆಯಲ್ಲಿ ಪಶುಸಂಗೋಪನೆ ಇಲಾಖೆಯ ಎಲ್ಲರೂ ಪಾಲುದಾರರಾಗಿ ಪುಣ್ಯಕೋಟಿ ದತ್ತು ಯೋಜನೆಗೆ ಶ್ರಮಿಸಬೇಕಿದ್ದು, ನೀವು ಪೋರ್ಟಲ್ ಮೂಲಕ ನೀಡಿದ ದೇಣಿಗೆಗಳು ನೇರವಾಗಿ ಗೋಶಾಲೆಗಳ ಬ್ಯಾಂಕ್ ಖಾತೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು  ಮಾಡಲಾಗಿದೆ ಎಂದು ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಪಶುಸಂಗೋಪನೆ ಇಲಾಖೆ ಮತ್ತು ಅದರಡಿಯಲ್ಲಿ ಬರುವ ಸಂಸ್ಥೆಗಳ ಎಲ್ಲಾ ಅಧಿಕಾರಿ-ಸಿಬ್ಬಂದಿಗಳು, ಯಥಾ ಶಕ್ತಿಯಾಗಿ ತಮ್ಮ ಸ್ವಂತ ಆದಾಯದಿಂದ ಮೂಕ ಪ್ರಾಣಿಗಳ ಸೇವೆಗೆ ಕಟ್ಟಿಬದ್ಧರಾಗಬೇಕಾಗಿದೆ. ಈ ಯೋಜನೆ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಯೋಜನೆ ಸಮರ್ಪಕ ಯಶಸ್ವಿಗೆ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸ್ಪಂದಿಸುವಂತೆ ಪ್ರಭು ಚವ್ಹಾಣ್ ಅವರು ಮನವಿ ಮಾಡಿದ್ದಾರೆ.

Advertisement

ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿ ಜಾನುವಾರುಗಳ ದತ್ತು (ADOPT) ಯೋಜನೆ, ಗೋಶಾಲೆಗಳಿಗೆ ದೇಣಿಗೆ (Donation) ಯೋಜನೆ ಹಾಗೂ ಜಾನುವಾರುಗಳಿಗಾಗಿ ಆಹಾರ (FEED A COW) ಯೋಜನೆಯಡಿ ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ವವ ಇತ್ಯಾದಿ) ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಲ್ಲಿರುವ ಗೋವುಗಳ ಆಹಾರಕ್ಕಾಗಿ ವಂತಿಗೆ ನೀಡಲು ಅವಕಾಶ ಕಲ್ಪಿಸಲಾಗಿದ್ದು, ತಾವೆಲ್ಲರೂ ಕೈ ಜೋಡಿಸುವಂತೆ ಪ್ರಭು ಚವ್ಹಾಣ್ ಅವರು ಪಶುಸಂಗೋಪನೆ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ವಿನಂತಿಸಿದ್ದಾರೆ.

ಇದನ್ನೂ ಓದಿ:ಇಂಡಿಯಾ ಎ ತಂಡಕ್ಕೆ ಶುಭ್ಮನ್ ಗಿಲ್ ನಾಯಕ?: ತಂಡಕ್ಕೆ ಶಮ್ಸ್ ಮಲಾನಿ ಆಯ್ಕೆ ಸಾಧ್ಯತೆ

ನೋಂದಾವಣೆಯಾಗಿರುವ ಗೋಶಾಲೆಗಳು / ಜಾನುವಾರುಗಳಿಗೆ ಜನರ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಗೋವುಗಳ ವರ್ಷದ ಮೇವಿನ ಖರ್ಚನ್ನು ನೀಡುವ ಮೂಲಕ 145 ಜನರು ಗೋವುಗಳ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಟ್ಟು 1500ಕ್ಕೂ ಹೆಚ್ಚು ಜನರು / ಸಂಘ ಸಂಸ್ಥೆಗಳು ದೇಣಿಗೆಗಳನ್ನು ನೀಡುವ ಮೂಲಕ ಗೋಮಾತೆಯ ಸಂರಕ್ಷಣೆಯ ಈ ಪುಣ್ಯಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಭು ಚವ್ಹಾಣ್ ಸಂತಸ ವ್ಯಕ್ತಪಡಿಸಿದ್ದಾರೆ.

ಪಶುಸಂಗೋಪನೆ ಇಲಾಖೆ ನನ್ನ ಕುಟುಂಬದ ಪರಿವಾರವಾಗಿದೆ. ದೇಶದಲ್ಲಿಯೇ ಪ್ರಥಮವಾಗಿ ಪುಣ್ಯಕೋಟಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಪುಣ್ಯ ಕೋಟಿ ಆನ್ ಲೈನ್ ಪೋರ್ಟಲ್ https://punyakoti.karahvs.in ಮೂಲಕ ಪುಣ್ಯಕೋಟಿ ಯೋಜನೆ ಯಶಸ್ವಿಗೆ ನನ್ನ ಪರಿವಾರ ತೋಡಗಿಸಿಕೊಂಡು ಶ್ರಮಿಸಬೇಕೆಂದು ಪ್ರಭು ಚವ್ಹಾಣ್ ಇದೇ ವೇಳೆ ಕಿವಿಮಾತು ಹೇಳಿದ್ದಾರೆ.

ಪಶುಸಂಗೋಪನೆ ಇಲಾಖೆಯ 9500 ಸಿಬ್ಬಂದಿಗಳು, 4200 ಸಂಸ್ಥೆಗಳು ಮತ್ತು ಕರ್ನಾಟಕ ಹಾಲು ಮಹಾಮಂಡಳ ವ್ಯಾಪ್ತಿಯಲ್ಲಿರುವ 10000ಕ್ಕೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಮಾತು ಬಾರದ ಮೂಕ ಪ್ರಾಣಿಗಳ ಸಂರಕ್ಷಣೆ, ಪಾಲನೆ, ಪೋಷಣೆ ಹಾಗೂ ನಿರ್ವಹಣೆಗೆ  ಕೈ ಜೋಡಿಸುವ ಮೂಲಕ ಪುಣ್ಯಕೋಟಿ ದತ್ತು ಯೋಜನೆ ಯಶಸ್ವಿಗೆ ಸ್ಪಂದಿಸುವಂತೆ ಪ್ರಭು ಚವ್ಹಾಣ್ ಕೋರಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next