Advertisement

ಗೋಶಾಲೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವ ಪ್ರಭು ಚವ್ಹಾಣ್

10:08 PM Jul 01, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಗೋಶಾಲೆಗಳ ವ್ಯವಸ್ಥೆ ಮತ್ತು ಗೋಸಂರಕ್ಷಣೆ ಚಟುವಟಿಕೆಗಳ ಬಗ್ಗೆ ಇಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಗೋಶಾಲೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

Advertisement

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಗೋಶಾಲೆಗಳ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ’ಗೋವುಗಳ ಆರೈಕೆಯಲ್ಲಿ ಯಾವುದೇ ವ್ಯತ್ಯೆಯ ಆಗದಂತೆ ನೋಡಿಕೊಳ್ಳಲು ಸೂಚಿಸಿದರು. ರಾಜ್ಯದಲ್ಲಿ 188 ಗೋಶಾಲೆಗಳಿದ್ದು 49,000 ಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಕೆಲವು ಗೋಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದು ಜಿಲ್ಲಾ ಪ್ರವಾಸದ ವೇಳೆ ಗಮನಿಸಿದ್ದೇನೆ. ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ಸಂರಕ್ಷಣೆಯಲ್ಲಿ ಎಲ್ಲ ಗೋಶಾಲೆಗಳು ಕೈಜೋಡಿಸಿರುವುದು ಸಂತಸದ ವಿಷ’ ಎಂದು ಅವರು ಹೇಳಿದರು.

ರಿಯಾಯಿತಿ ದರದಲ್ಲಿ ವಿದ್ಯುತ್ ಬೇಡಿಕೆ:

ರಾಜ್ಯದಲ್ಲಿ ನಡೆಯುತ್ತಿರುವ 188 ಗೋಶಾಲೆಗಳು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ತಿಂಗಳಿಗೆ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಬರುತ್ತಿದೆ. ಆದ್ದರಿಂದ ರಿಯಾಯತಿ ದರದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಗೋಶಾಲೆಗಳ ಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದಾರೆ.

ಸಹಾಯಧನ ಹೆಚ್ಚಿಸಲು ಬೇಡಿಕೆ:

Advertisement

ರಾಜ್ಯದಲ್ಲಿ ಸದ್ಯ ಪ್ರತಿ ಗೋವಿಗೆ ಪ್ರತಿ ದಿನಕ್ಕೆ ರೂ. 17.50 ಪೈಸೆ ಸಹಾಯಧನ  ನೀಡಲಾಗುತ್ತಿದೆ. ಆದರೆ ಗೋಶಾಲೆಗಳ ನಿರ್ವಹಣ ವೆಚ್ಚ ಹೆಚ್ಚಿರುವುದರಿಂದ ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಗೋಶಾಲೆಗಳ ಪ್ರತಿನಿಧಿಗಳು ತಿಳಿಸಿದರು. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ನೀಡುವ ಧನ ಸಹಾಯ ಕಡಿಮೆ ಇರುವುದರಿಂದ ರಾಜ್ಯದಲ್ಲಿಯೂ ಗೋ ನಿರ್ವಹಣಾ ವೆಚ್ಚ ಹೆಚ್ಚಿಸಲು ಕೇಳಿಕೊಂಡರು.

ವೈದ್ಯರ ನೇಮಕಾತಿಗೆ ಬೇಡಿಕೆ:

ಗೋವುಗಳ ಆರೋಗ್ಯ ಕಾಪಾಡುವುದು ಹೆಚ್ಚು ಸವಾಲಾಗಿದೆ. ಪಶುಸಂಗೋಪನೆ ಇಲಾಖೆಯಿಂದ 15ದಿನಕ್ಕೆ 2 ಬಾರಿಯಾದರು ಪಶುವೈದ್ಯರು ಗೋಶಾಲೆಗಳಿಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು ಎಂದು ಕೇಳಿಕೊಂಡರು.

ಮೇವು ಕತ್ತರಿಸುವ ಯಂತ್ರವನ್ನು ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡುವ ವ್ಯವಸ್ಥೆ ಮಾಡಲು ಈ ಸಂದರ್ಭದಲ್ಲಿ ಪ್ರತಿನಿಧಿಗಳು ಕೇಳಿಕೊಂಡರು. ಅಲ್ಲದೇ ಗೋವುಗಳ ಉತ್ಪನ್ನಗಳಿಗೆ ಮಾರುಕಟ್ಟೆ ರಾಜ್ಯದಲ್ಲಿ ಇಲ್ಲದಿರುವುದರಿಂದ ಮಾರಾಟದ ಸಮಸ್ಯೆ ಇದೆ. ಗೋ ಅರ್ಕ, ಸಗಣಿ, ಅಗರಬತ್ತಿ ಸೇರಿದಂತೆ 20 ಕ್ಕೂ ಹೆಚ್ಚು ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಲು ಸಚಿವರಿಗೆ ಮನವಿ ಮಾಡಿದರು. ಕೆ.ಎಂ.ಎಫ್ ಮಳಿಗೆಗಳಲ್ಲಿ ದೇಸಿ ಗೋಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿ ವ್ಯವಸ್ಥೆ ಮಾಡಲು ಗೋಶಾಲೆಗಳ ಪ್ರತಿನಿಧಿಗಳು ಕೇಳಿಕೊಂಡರು.

ಎಸ್.ಪಿ.ಸಿ.ಸಭೆ ನಡೆಯುತ್ತಿಲ್ಲ:

ಜಿಲ್ಲೆಗಳಲ್ಲಿ ನಿಯಮಿತವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಸಂಘದ ಸಭೆಗಳು ನಡೆಯುತ್ತಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರದಲ್ಲಿ ಎಸ್.ಪಿ.ಸಿ.ಎ ಜವಾಬ್ದಾರಿ ಹೆಚ್ಚಾಗಿದೆ. ಆದರೆ ಜಿಲ್ಲೆಯಲ್ಲಿ ಸಭೆ ನಡೆಸಲು ಜಿಲ್ಲಾಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಇದರಿಂದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ ನಿಟ್ಟಿನಲ್ಲಿ ಹಿನ್ನಡೆ ಆಗುತ್ತಿದೆ ಎಂದು ಹೇಳಿದರು. ಎಸ್.ಪಿ.ಸಿ.ಎ ಸಭೆ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ಸಚಿವರು ಗೋಶಾಲೆಗಳ ಪ್ರತಿನಿಧಿಗಳಿಗೆ ಭರವಸೆ ನೀಡಿದರು.

ಇದೇ ಮೊದಲ ಬಾರಿಗೆ ಖಾಸಗಿ ಗೋಶಾಲೆಗಳ ಪ್ರತಿನಿಧಿಗಳ ಸಭೆ ನಡೆಸಲಾಗಿದ್ದು, ಗೋಶಾಲೆಗಳನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಹಾಗೂ ಖಾಸಗಿ ಗೋಶಾಲೆಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.

ಅಲ್ಲದೇ ಗೋಹತ್ಯೆ ನಿಷೇಧ ಜಾರಿಯಾದ ನಂತರ ಸಂರಕ್ಷಿಸಿದ ಗೋವುಗಳನ್ನು ಖಾಸಗಿ ಗೋಶಾಲೆಗಳು ಹೆಚ್ಚು ಮುತುವರ್ಜಿವಹಿಸಿರುವುದರಿಂದ ಖಾಸಗಿ ಗೋಶಾಲೆಗಳ ಜವಾಬ್ದಾರಿ ಸಹ ಹೆಚ್ಚಾಗಿದೆ. ಇನ್ನು ಮುಂದೆ ಪ್ರತಿ 2 ತಿಂಗಳಿಗೊಮ್ಮೆ ಗೋಶಾಲೆಗಳ ಪ್ರತಿನಿಧಿಗಳ ಸಭೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಇತ್ತೀಚೆಗೆ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು, ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರ ಸೂಚನೆಯಂತೆ ಪ್ರತಿ ಗುರುವಾರ ಸಾರ್ವಜನಿಕರ, ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಅವಹಾಲುಗಳನ್ನು ಸ್ವೀಕರಿಸಲು ತಿಳಿಸಿರುವುದರಿಂದ ಇಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ವಿಕಾಸಸೌಧದಲ್ಲಿ ಅವಹಾಲುಗಳನ್ನು ಸ್ವೀಕರಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಹಾಗೂ ಪರಿಷತ್ ಸದಸ್ಯ ವಿಶ್ವನಾಥ ಅವರನ್ನು ಹಾಗೂ ಕಾರ್ಯಕರ್ತರನ್ನು ಸಚಿವರು ಕಚೇರಿಯಲ್ಲಿ ಭೇಟಿ ಮಾಡಿ ಅವರ ಅಭಿವೃದ್ಧಿ ಕುರಿತಾದ ಅವಹಾಲುಗಳನ್ನು ಆಲಿಸಿ ಸದ್ಯವಾದಷ್ಟು ಸಕಾಲದಲ್ಲಿ ಸ್ಪಂದಿಸುವುದಾಗಿ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next