ಹುಬ್ಬಳ್ಳಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶುಕ್ರವಾರ ಸಂಜೆ ಇಲ್ಲಿನ ವಾಯವ್ಯ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಗೆ ಭೇಟಿ ನೀಡಿ, ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿದರು.
ಪ್ರಯಾಣಿಕರ ಹಿತದೃಷ್ಟಿಯಿಂದ ಈಗಾಗಲೇ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವುದು ಹಾಗೂ ಸಂಚಾರಕ್ಕೆ ಯೋಗ್ಯವಾದ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಕರ್ಯವನ್ನು ಸಮರ್ಪಕ ಒದಗಿಸುವಂತೆ ಸೂಚಿಸಿದರು.
ಈಗಾಗಲೇ ಸರ್ಕಾರದಿಂದ ಸಂಸ್ಥೆಗೆ ಬಂದಿರುವ ಮಿನಿ ವಾಹನಗಳನ್ನು ನಗರ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಬಿಡುವುದು, ನಗರಗಳಲ್ಲಿ ಕಡಿಮೆ ಆದಾಯ ಬರುತ್ತಿರುವ ವಾಹನಗಳನ್ನು ಗ್ರಾಮೀಣ ಪ್ರದೇಶದ ಅನುಕೂಲಕ್ಕೆ ಬಳಸಿಕೊಳ್ಳುವ ಕುರಿತು ಕ್ರಮ ತೆಗೆದುಕೊಳ್ಳಬೇಕು.
ಸಂಸ್ಥೆಗೆ ಹೊಸ ವಾಹನಗಳ ಸೇರ್ಪಡೆ ಕುರಿತು ಚರ್ಚಿಸಿದರು. ಅನಂತರ ಸಚಿವರು ಹೊಸ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸೌಲಭ್ಯ-ವ್ಯವಸ್ಥೆ ಕುರಿತಾಗಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, 2017ನೇ ಸಾಲಿನ ಪೂರಕ ಆಯವ್ಯಯದಲ್ಲಿ ಸಂಸ್ಥೆಗೆ 250 ಕೋಟಿ ರೂ. ಅನುದಾನ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ವಿನೋತ್ ಪ್ರಿಯಾ, ಆಡಳಿತ ಮಂಡಳಿ ನಿರ್ದೇಶಕರಾದ ಆನಂದ ಕಲಾಲ, ಮನೋಜ ಕರಜಗಿ, ಮಾರುತಿ ಸಾಂಬ್ರಾಣಿ, ಉಪ ಸಾರಿಗೆ ಆಯುಕ್ತರು ಹಾಗೂ ಸಂಸ್ಥೆಯ ಅಧಿಕಾರಿಗಳು ಇದ್ದರು.