ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಹತ್ಯೆಗೆ ಭೂಗತ ರೌಡಿಯೊಬ್ಬರಿಗೆ ಸುಪಾರಿ ನೀಡಲಾಗಿದೆ ಎಂದು ಪೊಲೀಸ್ ಇಲಾಖೆಗೆ ಮಾಹಿತಿ ಲಭ್ಯವಾಗಿದ್ದು, ಸಚಿವ ವಿನಯ್ ಕುಲಕರ್ಣಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆಯಲ್ಲದೇ ಸಚಿವರಿಗೆ ಪೊಲಿಸ್ ಭದ್ರತೆಯನ್ನೂ ಹೆಚ್ಚಿಸಿದೆ.
ಸಚಿವರ ಹತ್ಯೆಗೆ ರಾಜ್ಯದ ಇಬ್ಬರು ಭೂಗತ ರೌಡಿಗಳಿಗೆ ಒಂದು ಕೋಟಿ ರೂ. ಸುಪಾರಿ ನೀಡಲಾಗಿದೆ. ಅದಕ್ಕಾಗಿ ಮುಂಗಡವಾಗಿ 10 ಲಕ್ಷ ರೂ. ಪಡೆದುಕೊಂಡಿದ್ದಾರೆಂಬ ಮಾಹಿತಿ ಪೊಲಿಸ್ ಇಲಾಖೆಗೆ ದೊರೆತಿದೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಸಚಿವ ವಿನಯ ಕುಲಕರ್ಣಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ನಾಲ್ಕು ಜನ ಗನ್ ಮನ್‌ಗಳನ್ನು ಹೆಚ್ಚುವರಿ ಭದ್ರತೆಗಾಗಿ ನಿಯೋಜಿಸಲಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಹಿರಿಯ ಪೊಲಿಸ್ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ರೌಡಿಗಳನ್ನು ಪತ್ತೆ ಹಚ್ಚಲು ಇಂಟರ್‌ಪೋಲ್ ಮೂಲಕ ಕಾರ್ಯಾಚರಣೆ ನಡೆಸಲು ಡಿವೈಎಸ್ಪಿ ಮಟ್ಟದ ಅಧಿಕಾರಿಗೆ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುಪಾರಿ ಹತ್ಯೆಯ ಬಗ್ಗೆ ಸಚಿವ ವಿನಯ ಕುಲಕರ್ಣಿ ಯಾವುದೇ ದೂರು ನೀಡಿಲ್ಲ. ಪೊಲೀಸರು ಸುಪಾರಿ ಪಡೆದಿರುವ ರೌಡಿಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಭೂಗತ ರೌಡಿ ಥೈಲ್ಯಾಂಡ್‌ನಿಂದ ಚಟುವಟಿಕೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ಪೊಲಿಸರಿಗೆ ಲಭಿಸಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಹಾಗೂ ಪುಣೆಯ ಮೂಲದ ಸುಪಾರಿ ಕಿಲ್ಲರ್‌ಗಳಿಗೆ ಈ ಹತ್ಯೆಯ ಜವಾಬ್ದಾರಿ ವಹಿಸಲಾಗಿದೆ ಎಂಬ ಮಾಹಿತಿ ಆಧರಿಸಿ ಪೊಲಿಸ್ ಅಧಿಕಾರಿಗಳು ಬೆಂಗಳೂರು ಹಾಗೂ ಧಾರವಾಡದಲ್ಲಿ ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಅವರ ಹತ್ಯೆಗೆ ಸುಪಾರಿ ಕೊಟ್ಟವರು ಯಾರು ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.