ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಓದದೇ ಅನೇಕ ಮಂದಿ ವಿರೋಧ ಮಾಡುತ್ತಿದ್ದಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಬುಧವಾರ ಜಯನಗರದ ಆರ್.ವಿ.ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ-2020′ ಕುರಿತ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾನಾಡಿದರು.
ನಮ್ಮಲ್ಲಿ ಮೂರು ರೀತಿಯವರಿದ್ದಾರೆ. ಒಬ್ಬರು ಹೊಸ ಶಿಕ್ಷಣ ನೀತಿ ಓದದೆ ಉತ್ತಮವಾಗಿದೆ ಅನ್ನುವವರು. ಇನ್ನೂಬ್ಬರು ಶಿಕ್ಷಣ ನೀತಿ ಬಗ್ಗೆ ಓದದೆ ವಿರೋಧಿಸುವವರು. ಮತ್ತೂಬ್ಬರು ನೂತನ ಶಿಕ್ಷಣ ನೀತಿಯನ್ನು ಓದಿ ಅರಿತುಕೊಂಡರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಓದದೇ ಅನೇಕ ಜನರು ವಿರೋಧ ಮಾಡುತ್ತಿದ್ದಾರೆ ಇದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲದಿಲ್ಲ ಎಂದರು.
ಈ ಹಿಂದೆ ಕೇಂದ್ರ ಸರ್ಕಾರ ಕೋವಿಡ್ ಲಸಿಕೆಯನ್ನು ನೀಡಲು ಹೊರಟಾಗಲೂ ವಿರೋಧಿಸಿದ್ದರು. ಹೀಗಾಗಿ ವಿರೋಧ ಮಾಡೋ ಜನರು ನಮ್ಮ ಮಧ್ಯೆ ಇದ್ದಾರೆ. ಆ ಹಿನ್ನೆಲೆಯಲ್ಲಿ ವಿರೋಧಿಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಈಗಿರುವ ಶಿಕ್ಷಣ ಪದ್ಧತಿ ಕುಟುಂಬಗಳನ್ನು ವಿಭಾಗ ಮಾಡುವ ವ್ಯವಸ್ಥೆಯನ್ನು ಹುಟ್ಟು ಹಾಕುತ್ತಿದೆ. ಇಂತಹ ವ್ಯವಸ್ಥೆಯ ಶಿಕ್ಷಣ ಬದಲಾವಣೆ ಆಗಬೇಕು.
ಇದನ್ನೂ ಓದಿ:- ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
75 ವರ್ಷಗಳ ಶಿಕ್ಷಣ ಸ್ವಾರ್ಥದ ಬದುಕು ಕಲಿಸಿಕೊಟ್ಟಿದೆ. ಶ್ಯಾಂ ಪ್ರಸಾದ್ ಮುಖರ್ಜಿ ಅವರು ಶಿಕ್ಷಣ ವ್ಯವಸ್ಥೆ ಬಗ್ಗೆ ಅಂದೇ ಧ್ವನಿ ಎತ್ತಿದ್ದರು. ಪಂಚಶೀಲ ಶಿಕ್ಷಣ ನೀತಿ ಬರಬೇಕು ಎಂದು ಮುಖರ್ಜಿ ಅವರು ಪ್ರತಿಪಾದನೆ ಮಾಡಿದ್ದರು. ಜತೆಗೆ ಮೆಕ್ಯಾಲೆ ಶಿಕ್ಷಣ ವ್ಯವಸ್ಥೆಯನ್ನು ಕೂಡ ವಿರೋಧಿಸಿದ್ದರು ಎಂದು ಹೇಳಿದರು. ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಪಿಯುಸಿ ಬೋರ್ಡ್ ನಿರ್ದೇಶಕಿ ಸ್ನೇಹಲ್ ಸೇರಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಈ ನೀತಿ ಏಕಾಏಕಿ ಬಂದಿಲ್ಲ
ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಎಂ.ಕೆ. ಶ್ರೀಧರ್, ಹೊಸ ಶಿಕ್ಷಣ ನೀತಿ ಏಕಾಏಕಿ ಬಂದಿದ್ದಲ್ಲ. 2015ರಲ್ಲಿ ಉನ್ನತ ಶಿಕ್ಷಣ ಇಲಾಖೆಗೆ 20 ಮತ್ತು ಶಾಲಾ ಶಿಕ್ಷಣಕ್ಕೆ 13 ಪ್ರಶ್ನಾವಳಿಯನ್ನು ನೀಡಲಾಗಿತ್ತು. ಅವುಗಳನ್ನು ಎಲ್ಲಾ ಹಂತಗಳಲ್ಲಿ ಚರ್ಚೆ ಮಾಡಿ, ಸಲಹೆ ಪಡೆಯಲಾಗಿತ್ತು. 2016ರಲ್ಲಿ ಟಿ.ಎಸ್.ಆರ್. ಸುಬ್ರಹ್ಮಣ್ಯ ಸಮಿತಿ ವರದಿ ನೀಡಿತ್ತು. ಬಳಿಕ 2017ರಲ್ಲಿ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಅದರ ಆಧಾರದ ಮೇಲೆ ಏಳೆಂಟು ತಿಂಗಳು ಚರ್ಚೆ ನಡೆದು 2 ಲಕ್ಷಕ್ಕೂ ಹೆಚ್ಚು ಅಭಿಪ್ರಾಯ ಕ್ರೋಢೀಕರಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಟಿಸಲಾಗಿದೆ ಎಂದರು.