ಕೋಟ/ಬ್ರಹ್ಮಾವರ: ರಾಜ್ಯ ಸರಕಾರದ ಜನಸ್ಪಂದನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಲುವಾಗಿ ಕಂದಾಯ ಸಚಿವ ಆರ್. ಅಶೋಕ್ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಕೊಕ್ಕರ್ಣೆ, ಕೆಂಜೂರು ಮತ್ತು ಆರೂರು ಗ್ರಾಮಗಳಿಗೆ ಫೆ. 19ರಂದು ಭೇಟಿ ನೀಡಲಿದ್ದು ಗ್ರಾಮ ಗಳು ಸಚಿವರ ಸ್ವಾಗತಕ್ಕೆ ಸಿದ್ಧಗೊಳ್ಳುತ್ತಿದೆ.
ಅಂದು ಬೆಳಗ್ಗೆ 12.30ಕ್ಕೆ ಕೊಕ್ಕರ್ಣೆ ಬಸ್ ನಿಲ್ದಾಣದಿಂದ ಕೊಕ್ಕರ್ಣೆ ಕೆ.ಪಿ.ಎಸ್. ಸ್ಕೂಲ್ ತನಕ ಮೆರವಣಿಗೆ ನಡೆದು, ಶಾಲೆ ಮೈದಾನದಲ್ಲಿ ವಿವಿಧ ಸವಲತ್ತುಗಳ ವಿತರಣೆ, ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಶಾಲಾ ಮೈದಾನದಲ್ಲಿ ಕಾರ್ಯಕ್ರಮದ ವೇದಿಕೆ ಸಿದ್ಧಗೊಳ್ಳುತ್ತಿದೆ. ಇದೇ ಪ್ರದೇಶದಲ್ಲಿ ಊಟೋಪಚಾರವೂ ನಡೆಯುವುದರಿಂದ ಈ ಕುರಿತು ತಯಾರಿಗಳು ಆರಂಭಗೊಂಡಿದೆ. ಅಪರಾಹ್ನ 4 ಗಂಟೆಗೆ ಕೊಕ್ಕರ್ಣೆ ಒಳಬೈಲು ಕುಡುಬಿ ಸಮು ದಾಯದವರ ಜತೆ ಸಂವಾದ ನಡೆಯಲಿದೆ. ಸಂಜೆ 6ಕ್ಕೆ ಆರೂರು ಮುಂಡ್ಕಿನಜಡ್ಡು ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಾಸ್ತವ್ಯ ಹೂಡುವ ಸಚಿವರ ಸಮ್ಮುಖ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ ಜರಗಲಿದೆ.
ಫೆ. 20ರಂದು ಬೆಳಗ್ಗೆ 8.15ಕ್ಕೆ ಕೆಂಜೂರಿನ ಕೊರಗ ಸಮುದಾಯದ ಕುಮಾರ ಅವರ ಉಪಹಾರ ಜರಗಲಿದ್ದು ಈ ಪ್ರದೇಶದಲ್ಲಿ ಕೂಡ ಸಿದ್ದತೆ ನಡೆಯಲಿದೆ.
ಸಚಿವರ ಭೇಟಿ ಹಿನ್ನೆಲೆಯಲ್ಲಿ ಶಾಸಕ ಕೆ. ರಘುಪತಿ ಭಟ್ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಕ್ಕರ್ಣೆಯ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಸಿ ಪೂರ್ವ ತಯಾರಿಯ ಸ್ಥಿತಿ ಗತಿಯ ಬಗ್ಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಹರ ಕಲ್ಮಾಡಿ, ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ನಗರ ಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷರಾದ ಕೊಕ್ಕರ್ಣೆಯ ಲಕ್ಷ್ಮೀ, ಆರೂರಿನ ಮಮತಾ ಶೆಟ್ಟಿ, ನೀಲಾವರದ ಮಹೇಂದ್ರ ಕುಮಾರ್, ಜಿ.ಪಂ. ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಚೇರ್ಕಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಕೊಕ್ಕರ್ಣೆ ಗ್ರಾ.ಪಂ. ಸದಸ್ಯರು, ಪಕ್ಷದ ಮುಖಂಡರು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಅಹವಾಲು ಸ್ವೀಕಾರ: ಏನೆಲ್ಲ ಚರ್ಚೆ? :
ಅಪರಾಹ್ನ 2ರಿಂದ ಕೊಕ್ಕರ್ಣೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಹಕ್ಕುಪತ್ರ ವಿತರಣೆ ಜರಗಲಿದ್ದು, ಈ ಸಂದರ್ಭ ಪ್ರಮುಖವಾಗಿ ಈ ಭಾಗದ ಡೀಮ್ಡ್ ಫಾರೆಸ್ಟ್ ವಿಚಾರ ಚರ್ಚೆ ನಡೆಯಲಿದೆ. ಜತೆಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಹಕ್ಕುಪತ್ರ ಸಮಸ್ಯೆ, ಸಿಬಂದಿ ಕೊರತೆ, ಸರ್ವರ್ ಸಮಸ್ಯೆಯಿಂದ ಇಲಾಖಾ ಸೇವೆಗಳಿಗೆ ಹಿನ್ನಡೆ, ಸರ್ವೇಯರ್‌ಗಳ ಕೊರತೆಯಿಂದ ಎದುರಾಗುತ್ತಿರುವ ಸಮಸ್ಯೆ ಗಳು, ಅಟಲ್ ಜೀ ಕೇಂದ್ರದ ಸಮಸ್ಯೆ, ತಾ| ವ್ಯಾಪ್ತಿಯ ವಿವಿಧ ಸಮಸ್ಯೆ ಪ್ರಮುಖವಾಗಿ ಪ್ರಸ್ತಾವವಾಗುವ ಸಾಧ್ಯತೆ ಇದೆ.