ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಅ. 8ರಂದು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭ ಅವರು ಮಾಧ್ಯಮದ ಜತೆ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಅತಿಥಿ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಿಂದ ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಿಸಲು ಇಲಾಖೆಗೆ ಸ್ಪಷ್ಟ ಆದೇಶ ನೀಡಲಾಗಿದೆ. ಶಿಕ್ಷಣದಲ್ಲಿ ಗುಣಮಟ್ಟ ವೃದ್ಧಿಸುವ ನಿಟ್ಟಿನಿಂದ ಸುಮಾರು 5 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ.
ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆ ಕೂಡ ಚಿಂತನೆ ನಡೆಸಲಾಗಿದೆ. ಈಗಾಗಲೇ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆಗೆ ಕೋವಿಡ್ ಆರ್ಥಿಕ ಕಾರಣದಿಂದಾಗಿ ವಿತರಿಸಲಾಗಲಿಲ್ಲ ಎಂದವರು ತಿಳಿಸಿದರು.
ಇದನ್ನೂ ಓದಿ:ರಸಗೊಬ್ಬರ ಕೊರತೆ ನಿವಾರಣೆ: ಕೇಂದ್ರ ಸಚಿವರ ಭರವಸೆ
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಅರ್ಚಕ ವೆಂಕಟನಾರಾಯಣ ಉಪಾಧ್ಯಾಯ ಹಾಗೂ ಸಹೋದರರು, ರಾಜ್ಯ ಆಹಾರ, ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಕುಂಭಾಸಿ ಗ್ರಾ.ಪಂ. ಅಧ್ಯಕ್ಷ ಶ್ವೇತಾ ಎಸ್.ಆರ್., ಗ್ರಾ.ಪಂ. ಸದಸ್ಯ ಕಮಲಾಕ್ಷ ಪೈ, ಕುಂಭಾಸಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ಕಾಮತ್, ಮಹೇಶ್ ಶೆಣೈ, ರಾಜೇಶ್ ಪೈ, ಶಾಲಾ ಮುಖ್ಯಶಿಕ್ಷಕಿ ಶರ್ಮಿಳಾ ಜಿ., ಡಿಡಿಪಿಐ ಎನ್.ಎಚ್. ನಾಗೂರ, ಅರ್ಚಕ ಮಂಡಳಿ ಸದಸ್ಯರು, ದೇಗುಲದ ಮ್ಯಾನೇಜರ್ ನಟೇಶ್ ಕಾರಂತ್ ತೆಕ್ಕಟ್ಟೆ ಹಾಗೂ ಸಿಬಂದಿ ಉಪಸ್ಥಿತರಿದ್ದರು.