Advertisement

ಶಿಕ್ಷಣ ಸಚಿವರ ನಡೆ ಖಂಡಿಸಿ ಪ್ರತಿಭಟನೆ

03:03 PM Jul 22, 2017 | Team Udayavani |

ಚಿತ್ರದುರ್ಗ: ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ಪ್ರತಿಬಂಧಿ ಸಲು ಹೊರಟಿರುವ ಶಿಕ್ಷಣ ಸಚಿವರ ನಡೆ ಖಂಡಿಸಿ
ಹಾಗೂ ಪ್ರಜಾಪ್ರಭುತ್ವದಲ್ಲಿನ ಹೋರಾಟ ಹಕ್ಕು ಮೊಟಕುಗೊಳಿಸುವ ಯತ್ನಕ್ಕೆ ಕೈ ಹಾಕಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಚಿತ್ರದುರ್ಗದ ಜಿಲ್ಲಾಧಿಕಾರಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವೂ ಕಾಲೇಜ್‌ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ಪ್ರತಿಬಂಧಿಸಲು ಹೊರಟಿದ್ದು, ತುರ್ತು ಪರಿಸ್ಥಿತಿ ಹೇರುವ ಮೂಲಕ ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಕಾಲೇಜು ಕ್ಯಾಂಪಸ್‌ ನಾಯಕತ್ವದಿಂದಲೇ ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅನೇಕ ವಿದ್ಯಾರ್ಥಿಗಳು ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯುವ ಮತದಾರರ ಮೇಲೆ ಕಣ್ಣಿಟ್ಟಿರುವ ಸರ್ಕಾರ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಿಗೆ ನ್ಯಾಯಯುತ ಬೇಡಿಕೆಗಾಗಿ ಪ್ರತಿಭಟಿಸಲು ಅವಕಾಶ ನೀಡದೆ ನಿರ್ಬಂಧ ಹೇರಲು ಮುಂದಾಗಿದೆ. ಇದರ ಮೂಲಕ ಅಡ್ಡದಾರಿಯಲ್ಲಿ ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಪ್ರತಿಭಟಿಸಲು ಅವಕಾಶವೇ ಇಲ್ಲದಂತೆ ಮಾಡಲು ಶಿಕ್ಷಣ ಸಚಿವರು ಮುಂದಾಗಿದ್ದಾರೆ. ಸರ್ಕಾರದ ಈ ಕ್ರಮ ಸಂವಿಧಾನದತ್ತ ಆಶಯಗಳಿಗೆ ವಿರುದ್ಧವಾಗಿದ್ದು, ಅವರ ಅಭಿವ್ಯಕ್ತಿ ಸ್ವಾತಂತ್ರ ಕಿತ್ತುಕೊಂಡಂತಾಗುತ್ತದೆ. ಆದ್ದರಿಂದ ಸಂಘಟನೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರವಾಗಿದೆ. ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿಗಳಾದ ಎ.ಎಸ್‌. ಚಂದ್ರಶೇಖರ್‌, ಭಾರ್ಗವಿ ದ್ರಾವಿಡ್‌,ರಾಜ್ಯ ಕಾರ್ಯಾಕಾರಿಣಿ ಸದಸ್ಯ ಯೋಗೀಶ್‌, ನಗರ ಕಾರ್ಯದರ್ಶಿ ಜಗದೀಶ, ದೀನುಗೌಡ ಅವರೂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next