ಕೋಲಾರ: ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದು, ಮೋದಿಗೆ ಮತ ಹಾಕಿದರು ಎಂಬ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿಕೆಗೆ ರಾಜ್ಯ ವಸತಿ ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜನರ ಸೇವೆಯೇ ದೇವರ ಸೇವೆ, ಕರ್ತವ್ಯವೇ ದೇವರು. ರಾಜಕೀಯದ ಕೋಪದಿಂದ ಮುನಿಯಪ್ಪ ಹಾಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಅಕ್ಕಿ ಅನ್ನ ತಿಂದು ಬಿಜೆಪಿಗೆ ಓಟು ಹಾಕಿದರು ಎಂಬ ಮುನಿಯಪ್ಪ ಹೇಳಿಕೆಗೆ ನನ್ನ ಆಕ್ಷೇಪವಿದೆ.
ಜನರಿಗೆ ಯೋಜನೆ ನೀಡಿ, ಓಟು ಯಾಕೆ ಹಾಕಿಲ್ಲ ಎಂದು ಕೇಳ್ಳೋದು ಸಮಂಜಸವಲ್ಲ. ನೀಡಿದ ಭರವಸೆಯಂತೆ ಎಲ್ಲಾ ಕೆಲಸ ಮಾಡಿ ದುಡಿಮೆಗೆ ಬೆಲೆಯನ್ನು ಸಿದ್ದರಾಮಯ್ಯ ಕೇಳಿದ್ದಾರೆ ಅಷ್ಟೆ, ಕೊಟ್ಟಿದ್ದನ್ನು ಹೇಳಿಕೊಳ್ಳುವುದು ಬೇಡ. ಸರ್ಕಾರ ಬಡವರ ಪರವಾಗಿ ಕೊಟ್ಟ ಯೋಜನೆಗಳನ್ನು ಹೇಳಿಕೊಳ್ಳಬಾರದು ಎಂದರು.
ವಾಸ್ತವವಾಗಿ ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಣದಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು. ಸರ್ಕಾರದ ಆಡಳಿತ, ಆದೇಶಗಳು ಎಲ್ಲವೂ ಕನ್ನಡದಲ್ಲೇ ಇವೆ. ಆದರೆ, ಇಂಗ್ಲೀಷ್ ಜ್ಞಾನದ ಕೊರತೆಯಿಂದ ಕನ್ನಡ ಶಾಲೆ, ಕಾಲೇಜಿನಲ್ಲಿ ಓದಿದ ಮಕ್ಕಳು ಕೈಗಾರಿಕೆ, ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಆಗುತ್ತಿಲ್ಲ.
ವಾಚ್‌ಮನ್, ಕಸ ಗುಡಿಸುವವರು, ಡ್ರೈವರ್…ಎಲ್ಲಾ ಹುದ್ದೆಗೂ ಈಗ ಇಂಗ್ಲೀಷ್ ಗೊತ್ತಿರಬೇಕು. ಅಂತಹ ಕಷ್ಟದ ದಿನಗಳನ್ನು ಕಾಣುತ್ತಿದ್ದೇವೆ. ಹೀಗಾಗಿ, ಸರ್ಕಾರ ಕನ್ನಡ ಶಾಲೆಗಳಲ್ಲೂ ಇಂಗ್ಲೀಷ್ ಮಾಧ್ಯಮ ಬೋಧನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.