ದಾವಣಗೆರೆ: ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಲವು ಗಂಭೀರ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದು, ಅವುಗಳ ಸೂಕ್ತ ತನಿಖೆ ನಡೆಸಬೇಕೆಂದು ರಾಜ್ಯಪಾಲರಿಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಮೆರವಣಿಗೆ ನಡೆಸಿದರು.
ಕೆ.ಬಿ. ಬಡಾವಣೆಯಲ್ಲಿನ ಪಕ್ಷದ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಪಿಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದೆ.
ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಎಂ.ಟಿ.ಬಿ. ನಾಗರಾಜ್, ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಟಾಳ್ಕರ್ ಇತರರ ಮನೆ ಐಟಿ ದಾಳಿ ನಡೆದಿದ್ದು, ಅವರೆಲ್ಲಾ ಭ್ರಷ್ಟಾಚಾರದ ಮೂಲಕ ಹಣ ಸಂಪಾದನೆ ಮಾಡಿರುವುದು ಬಯಲಾಗಿದೆ. ಆದರೆ, ಸರ್ಕಾರ ಮಾತ್ರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಶಾಸಕ ನಾಗರಾಜ್ ಮನೆ ಮೇಲೆ ಐಟಿ ದಾಳಿಮಾಡಿದ ವೇಳೆ 140 ಕೋಟಿ ರೂ.ಗೂ ಅಧಿಕ ನಗದು, ಬೇನಾಮಿ ಆಸ್ತಿ ದಾಖಲೆ ಪತ್ತೆಯಾಗಿದೆ. ಮುಖ್ಯಮಂತ್ರಿಗಳ ಆಪ್ತ ಗೋವಿಂದರಾಜ್ ನಿವಾಸದ ಮೇಲೆ ದಾಳಿ ಸಂದರ್ಭದಲ್ಲಿ ಸಿಕ್ಕ ಡೈರಿಯಲ್ಲಿ ಸೀrಲ್ ಬ್ರಿಡ್ಜ್ ಯೋಜನೆಗೆ ಕಾಂಗ್ರೆಸ್ ಸರ್ಕಾರಕ್ಕೆ 65 ಕೋಟಿ ರೂ. ಸಂದಾಯವಾದ ಕುರಿತು ಪ್ರಸ್ತಾಪ ಇದೆ ಎಂದು ಅವರು ಆರೋಪಿಸಿದರು.
ಶಾಸಕ ಕೆ. ಮಾಡಾಳು ವಿರುಪಾಕ್ಷಪ್ಪ ಮಾತನಾಡಿ, ಮೇಲ್ನೋಟಕ್ಕೆ ಸಚಿವರು, ಆಡಳಿತ ಪಕ್ಷದ ಶಾಸಕರ ಅಕ್ರಮ ಸಂಪಾದನೆ ಪತ್ತೆ ಆಗಿದೆ. ಕಾಂಗ್ರೆಸ್ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಬೇಕು. ಎಲ್ಲಾ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಮುಕ್ತ ಎಂಬುದು ಶುದ್ಧ ಸುಳ್ಳು.
ಆಡಳಿತ ಪಕ್ಷದ ಅನೇಕ ಶಾಸಕರು, ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ಇಲ್ಲವೇ ರಾಜ್ಯಪಾಲರೇ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಶಾಸಕ ಬಿ.ಪಿ. ಹರೀಶ್, ತಾಪಂ ಸದಸ್ಯ ಆಲೂರು ನಿಂಗರಾಜ್, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಅಣಬೇರು ಜೀವನಮೂರ್ತಿ, ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಪಿ.ಸಿ. ಶ್ರೀನಿವಾಸ್, ಎಚ್.ಎನ್. ಶಿವಕುಮಾರ್, ಎಲ್.ಡಿ. ಗೋಣೆಪ್ಪ, ಮಾಲತೇಶ್ ಭಂಡಾರಿ, ಬಿ. ರಮೇಶ್‌ನಾಯಕ್, ಎ.ಇ. ನಾಗರಾಜ್, ಬಿ.ಟಿ.ಸಿದ್ದಪ್ಪ, ಬೇತೂರು ಬಸವರಾಜಪ್ಪ, ಹಾಲಮ್ಮ, ಜಯಲಕ್ಷ್ಮಿಮಹೇಶ್ ಮೆರವಣಿಗೆ ನೇತೃತ್ವ ವಹಿಸಿದ್ದರು.