Advertisement

ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಕಡಿದು ಹಾಕಿದ್ದೇನು  ?

03:53 PM Feb 11, 2021 | Team Udayavani |

ಚಿತ್ರದುರ್ಗ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಏನು ಕಡಿದು ಹಾಕಿದ್ದಾರೆ. ಹಿಂದುಳಿದವರು,  ದಲಿತರನ್ನು ಬಳಸಿಕೊಂಡು ಮುಖ್ಯಮಂತ್ರಿಯಾಗಿ ಅವರಿಗೆ ಯಾವ ಕೊಡುಗೆ ಕೊಟ್ಟಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು.

Advertisement

ಹೊಸದುರ್ಗ ತಾಲೂಕು ಬ್ರಹ್ಮವಿದ್ಯಾನಗರದಲ್ಲಿ ಬುಧವಾರ ಭಗೀರಥ ಮಠದ ಶ್ರೀ ಪುರುಷೋತ್ತಮಾನಂದಪುರಿ ಶ್ರೀಗಳ 21ನೇ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಧಿಕಾರಾವ ಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಯಾವುದೇ ಮೀಸಲಾತಿ ದೊರಕಿಸಿಕೊಡದೆ ಈಗ ಮೀಸಲಾತಿಯ ಬಗ್ಗೆ ಮಾತನಾಡಲು ಯಾವ ಯೋಗ್ಯತೆಯಿದೆ ಎಂದು ಕುಟುಕಿದರು. ಬೆಂಗಳೂರಿನಲ್ಲಿ ನಡೆದ ಕುರುಬರ ಸಮಾವೇಶದ ಯಶಸ್ಸು ಕಂಡು ಸಿದ್ದರಾಮಯ್ಯ ಅವರಿಗೆ ಕಿರಿಕಿರಿಯಾಗಿದೆ. ಸ್ವಾಮೀಜಿಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಬಂದಾಗ ಸೌಜನ್ಯಕ್ಕೂ ಹೋಗಿ ಅವರನ್ನು ಮಾತನಾಡಿಸಲಿಲ್ಲ. ಈಗ ಇಡೀ ಕುರುಬ ಸಮಾಜ ಜಾಗೃತವಾಗಿದೆ. ನನ್ನನ್ನು ಪಕ್ಕಕ್ಕೆ ತಳ್ಳುತ್ತಿದ್ದಾರೆ ಎನ್ನುವುದು ಅರಿವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಮಾವೇಶದಲ್ಲಿ ಸ್ವಾಮೀಜಿಯವರು ಪ್ರಧಾನಿ ನರೇಂದ್ರ ಮೋದಿ ಕುರುಬರನ್ನು ಎಸ್‌ಟಿಗೆ ಸೇರಿಸಿದರೆ 60  ಲಕ್ಷ ಕುರುಬರು ಬೆಂಬಲವಾಗಿರುತ್ತೇವೆ ಎಂದು ಹೇಳಿಕೆ ನೀಡಿರುವುದು ಸಿದ್ದರಾಮಯ್ಯ ಅವರಿಗೆ ತಡೆದುಕೊಳ್ಳಲಾಗಿಲ್ಲ. ಸಮಾಜ ಎಲ್ಲರ ಹೇಳಿಕೆಗಳನ್ನು ಗಮನಿಸುತ್ತಿದೆ ಎಂದರು.

ಸಿದ್ದರಾಮಯ್ಯ ಎಲ್ಲಿದ್ದಾರೆ, ಕಾಂಗ್ರೆಸ್‌ ಎಲ್ಲಿದೆ ಎಂದ ಈಶ್ವರಪ್ಪ, ರಾಜ್ಯದ 28 ರಲ್ಲಿ 25 ಲೋಕಸಭಾ ಕ್ಷಢೇತ್ರ  ಹಾಗೂ 104 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ಕೆಲಸ ಆಗುತ್ತಿರಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ನಲ್ಲಿದ್ದ 17 ಜನ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ ಎಂದು ತಿಳಿಸಿದರು.

Advertisement

ಮತ್ತೆ ಸಿಎಂ ಆಗೋದು ಹಗಲುಗನಸು: ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಹಗಲುಗನಸು. ಅವರ ನಾಯಕರು, ಡಿಕೆಶಿ ಸೇರಿದಂತೆ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಲ್ಲ. ಹಾಗಂತ ಡಿ.ಕೆ. ಶಿವಕುಮಾರ್‌ ಬಳಿ ಹೇಳಿಸಲಿ ನೋಡೋಣ, ಕಾಂಗ್ರೆಸ್‌ನಲ್ಲಿ ರಕ್ತಪಾತ ಆಗುತ್ತೆ. ಒಬ್ಬರಿಗೊಬ್ಬರು ಬಡಿದಾಡಿಕೊಂಡು ಸತ್ತು ಬಿಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯರ ಅಹಿಂದ ಹೋರಾಟ ಸ್ವಾಗತಾರ್ಹ. ಈಗ ಅಲ್ಪಸಂಖ್ಯಾತರನ್ನು ಬಿಟ್ಟಿದ್ದಾರೆ ಅವರು. ಸಾಬರನ್ನು ಕಟ್ಟಿಕೊಂಡು ಹೋದ್ರೆ ಉದ್ಧಾರ ಆಗಲ್ಲ ಅಂತಾ ಗೊತ್ತಾಗಿದೆ. ಈಗಲಾದರೂ ಹಿಂದುಳಿದವರು, ದಲಿತರ ಬಗ್ಗೆ ನೆಲ ಕಚ್ಚಿದ ಕಾಂಗ್ರೆಸ್‌ ಹಾಗೂ ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ ಅವರಿಗೆ ನೆನಪಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ :ರಥೋತ್ಸವದೊಂದಿಗೆ ಸುತ್ತೂರು ಜಾತ್ರೆಗೆ ತೆರೆ

ಬೆಳಗಾವಿ ಲೋಕಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿ ಹಾಕದಿರುವ ಜೆಡಿಎಸ್‌ ನಾಯಕ ದೇವೇಗೌಡರ ತೀರ್ಮಾನದ ಕುರಿತ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಿಜೆಪಿ ದೇಶದಲ್ಲಿ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಗಮನಿಸಿ ದೇವೇಗೌಡರು ಅಭ್ಯರ್ಥಿ ಹಾಕದಿರಬಹುದು ಎಂದು ನಾನು ಭಾವಿಸುತ್ತೇನೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಬಗ್ಗೆ ಅವರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಭಕ್ತ ರೈತರು ಈ ಕಾಯ್ದೆಯಿಂದ ಅನುಕೂಲವಾಗುತ್ತದೆ ಎಂದು ಸ್ವಾಗತ ಮಾಡಿದ್ದಾರೆ. ಕೆಲವರು ವಿರೋಧ ಮಾಡುತ್ತಿದ್ದಾರೆ. ಮನಮೋಹನ್‌ ಸಿಂಗ್‌ ತರಬೇಕಾಗಿದ್ದ ಕಾಯ್ದೆಯನ್ನು ಮೋದಿ ತಂದಿದ್ದಾರೆ ಎಂದು ವಿರೋಧಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next