Advertisement

ಮತ್ತೆ ಅರ್ಜಿ ಸ್ವೀಕಾರಕ್ಕೆ ಅವಧಿ ವಿಸ್ತರಣೆ ಪ್ರಸ್ತಾವ ಸರಕಾರದ ಮುಂದಿಲ್ಲ: ಸಚಿವ

10:34 PM Feb 19, 2024 | Team Udayavani |

ಬೆಂಗಳೂರು: ಸರಕಾರಿ ಜಮೀನಿನಲ್ಲಿ 2015ಕ್ಕೆ ಮೊದಲು ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು 94(ಸಿ) ಹಾಗೂ 94(ಸಿಸಿ) ಕಲಂ ಅನ್ವಯ ಮತ್ತೆ ಅರ್ಜಿ ಸ್ವೀಕಾರಕ್ಕೆ ಅವಧಿ ವಿಸ್ತರಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಸ್ಪಷ್ಟಪಡಿಸಿದ್ದಾರೆ.

Advertisement

ಉಡುಪಿ ಶಾಸಕ ಯಶಪಾಲ್‌ ಎ. ಸುವರ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2015ರ ವರೆಗೆ ಅನ್ವಯವಾಗುವಂತೆ ಈ ಅವಕಾಶ ಕಲ್ಪಿಸಲಾಗಿತ್ತು. ಆದರೆ 2016ರಿಂದ 2022 ಮಾರ್ಚ್‌ ವರೆಗೂ ಅವಧಿ ವಿಸ್ತರಿಸಲಾಗಿದೆ. ಈಗಾಗಲೇ ನಾಲ್ಕರಿಂದ ಐದು ಬಾರಿ ಸಮಯಾವಕಾಶ ನೀಡಲಾಗಿದ್ದು, ಮತ್ತೆ ಸಾಧ್ಯವಿಲ್ಲ. ಬಡವರ ಹೆಸರಿನಲ್ಲಿ ಅನರ್ಹರೂ ಅರ್ಜಿ ಸಲ್ಲಿಸಿದ್ದಾರೆ. ನೆಲಮಂಗಲದಲ್ಲಿ ಇದೇ ಕಾರಣಕ್ಕಾಗಿ ತಹಶೀಲ್ದಾರ್‌ ಒಬ್ಬರನ್ನು ಅಮಾನತು ಮಾಡಿದ್ದೇನೆ. ಇನ್ನು ಮುಂದೆ ಇಂಥ ತಪ್ಪುಗಳಿಗೆ ಅವಕಾಶ ನೀಡಬಾರದು ಎಂದು ನಿರ್ಧರಿಸಲಾಗಿದೆ ಎಂದರು.

ಈ ಒನ್‌ ಟೈಮ್‌ ಸೆಟ್ಲಮೆಂಟ್‌ ಪ್ರಕ್ರಿಯೆ ಬಗ್ಗೆ ನ್ಯಾಯಾಲಯಗಳೂ ಅಸಮಾಧಾನ ವ್ಯಕ್ತಪಡಿಸಿವೆ. ಖಾಸಗಿ ಜಾಗದ ಅನಧಿಕೃತ ಲೇಔಟ್‌ ಸಕ್ರಮ ಪ್ರಕರಣ ಈಗ ಸುಪ್ರೀಂ ಕೋರ್ಟ್‌ನಲ್ಲಿದ್ದು, ಈ ಪ್ರಸ್ತಾವವನ್ನು ನ್ಯಾಯಾಲಯ ತಿರಸ್ಕರಿಸುವ ಸಾಧ್ಯತೆ ಹೆಚ್ಚಿದೆ. ಇದುವರೆಗೆ 4,12,056 ಅರ್ಜಿ ತಿರಸ್ಕೃತವಾಗಿದೆ.

ಉಡುಪಿ ಜಿಲ್ಲೆಯಲ್ಲಿ 94 ಸಿ ಅನ್ವಯ 38,506 ಅರ್ಜಿಗಳು ಸ್ವೀಕೃತವಾಗಿದ್ದು, 10,058 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. ಒಟ್ಟು 24,449 ಅರ್ಜಿ ತಿರಸ್ಕೃತಗೊಂಡಿರುತ್ತದೆ. 3,949 ಅರ್ಜಿ ಇತ್ಯರ್ಥಗೊಳಿಸುವುದಕ್ಕೆ ಬಾಕಿ ಇರುತ್ತದೆ. 94 ಸಿಸಿ ಅನ್ವಯ ಬಾಕಿ ಇರುವ ಅರ್ಜಿಗಳನ್ನು ಡೀಮ್ಡ್ ಫಾರೆಸ್ಟ್‌ ಎಂಬ ಕಾರಣಕ್ಕಾಗಿ ಜಂಟಿ ಸರ್ವೆ ಕಾರ್ಯ ಕೈಗೊಳ್ಳುವ ಉದ್ದೇಶದಿಂದ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಬಗರ್‌ಹುಕುಂ: 54 ಲಕ್ಷ ಎಕ್ರೆ ಜಾಗಕ್ಕೆ ಅರ್ಜಿ ಸಲ್ಲಿಕೆ ಬಗರ್‌ ಹುಕುಂ ಸಕ್ರಮಕ್ಕಾಗಿ ಇದುವರೆಗೆ 9 ಲಕ್ಷ 58 ಸಾವಿರ ಅರ್ಜಿ ಸ್ವೀಕಾರವಾಗಿದ್ದು, 54 ಲಕ್ಷ ಎಕ್ರೆ ಸರಕಾರಿ ಭೂಮಿ ಮಂಜೂರಿಗೆ ಮನವಿ ಮಾಡಿದ್ದಾರೆ. ಆದರೆ ಇಷ್ಟು ಭೂಮಿಯ ಲಭ್ಯತೆ ಸರಕಾರದಲ್ಲಿಲ್ಲ. ನಿಯಮ ಮೀರಿ ಮಂಜೂರು ಮಾಡಿದರೆ ಸರಕಾರ ನ್ಯಾಯಾಲಯದಿಂದ ತಪರಾಕಿ ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಕೃಷ್ಣಬೈರೇಗೌಡರು ಕಳವಳ ವ್ಯಕ್ತಪಡಿಸಿದರು. 2005ಕ್ಕೆ 18 ವರ್ಷ ತುಂಬಿದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ 2005ರ ಬಳಿಕ ಹುಟ್ಟಿದವರೂ ಬಗರ್‌ ಹುಕುಂಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬಡವರಿಗಾಗಿ ತಂದ ಕಾಯಿದೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಆದಾಗಿಯೂ ಅರ್ಹ ಇರುವ ಅರ್ಜಿಗಳು ಬಿಟ್ಟು ಹೋದರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಇದುವರೆಗೆ 138 ತಾಲೂಕುಗಳಲ್ಲಿ ಬಗರ್‌ಹುಕುಂ ಸಮಿತಿ ರಚನೆ ಮಾಡಲಾಗಿದೆ ಎಂದು ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next