ಬೆಂಗಳೂರು: ಕೋವಿಡ್-19 ಸೋಂಕು ತಡೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಸುಮಾರು 40 ಲಕ್ಷಕ್ಕೂ ಹೆಚ್ಚು ಮುಂಬಯಿ ಕನ್ನಡಿಗರ ಸಹಿತ ದೇಶಾದ್ಯಂತ ಸಂಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿದ್ದಾರೆ.ಕರಾವಳಿ ಜಿಲ್ಲೆಗಳ ಸಹಿತ ರಾಜ್ಯಕ್ಕೆ ಮರಳಲು ಅವರು ಅವಕಾಶ ಕೋರುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದವರಲ್ಲಿ ಗರ್ಭಿಣಿಯರು, ವೃದ್ಧರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದವರು ಮನವಿ ಮಾಡಿದ್ದಾರೆ.
ತಮ್ಮ ಆಹಾರ ಖಾಲಿಯಾಗಿದ್ದು, ಅಲ್ಲಿನ ಸರಕಾರ ತಮ್ಮನ್ನು ಗುರುತಿಸುತ್ತಿಲ್ಲ. ಕುಡಿಯಲು ನೀರಿಲ್ಲ. ಕೈಯಲ್ಲಿದ್ದ ಹಣ ಖಾಲಿಯಾಗಿದೆ. ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಆತಂಕದಲ್ಲಿದ್ದು, ತಮ್ಮನ್ನು ರಕ್ಷಿಸಬೇಕು ಎಂದು ಸಂಕಷ್ಟಕ್ಕೆ ಸಿಲುಕಿದವರು ಅಳಲು ತೋಡಿಕೊಂಡಿದ್ದಾರೆ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಮುಂಬಯಿ ಕನ್ನಡಿಗರ ಸಹಿತ ದೇಶದ ನಾನಾ ಕಡೆ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ರಕ್ಷಣೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ತುರ್ತಾಗಿ ಅವರ ಅಹವಾಲು ಆಲಿಸಲು ಟೋಲ್ ಫ್ರೀ ಸಂಖ್ಯೆ ಸೇವೆಯನ್ನು ರಾಜ್ಯ ಮಟ್ಟದಲ್ಲಿ ಆರಂಭಿಸಬೇಕು. ದೂರುಗಳನ್ನು ಆಧರಿಸಿ ಸಂಬಂಧಪಟ್ಟ ರಾಜ್ಯಗಳ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಸಂತ್ರಸ್ತ ಕನ್ನಡರಿಗೆ ತುರ್ತು ಆಹಾರ ಸಾಮಗ್ರಿ, ಔಷಧ ವಿತರಣೆ ಜತೆಗೆ ಗರ್ಭಿಣಿಯರು, ಹೆತ್ತವರಿಂದ ದೂರವಿರುವ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳ ಬೇಕು ಎಂದು ಸೂಚನೆ ನೀಡಬೇಕು. ಅಂತಾರಾಜ್ಯ ಗಡಿ, ಭದ್ರತೆ ವಿಚಾರ ಗಮನ ದಲ್ಲಿಟ್ಟುಕೊಂಡು ಕನ್ನಡಿಗರಿಗೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಕೋರಿದ್ದಾರೆ.