Advertisement

ವಸತಿ ಶಾಲೆ ಹೆಣ್ಣುಮಕ್ಕಳ ಕರಾಟೆ ಕೌಶಲ್ಯ ವೀಕ್ಷಿಸಿದ ಸಚಿವ ಶ್ರೀನಿವಾಸ ಪೂಜಾರಿ

04:36 PM Jul 21, 2022 | Team Udayavani |

ಕೆ.ಆರ್.ಪೇಟೆ : ರಾಜ್ಯ ವಸತಿ ಶಾಲೆಗಳ ಹೆಣ್ಣುಮಕ್ಕಳ ಆತ್ಮರಕ್ಷಣೆಗಾಗಿ ರೂಪಿಸಿರುವ ಓಬವ್ವ ಆತ್ಮರಕ್ಷಣಾ ಕಲೆ ‘ಕರಾಟೆ’ ಯೋಜನೆಯಡಿ ಕರಾಟೆ ಯೋಜನೆಯ ಅನುಷ್ಠಾನಕ್ಕಾಗಿ 18 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಶೆಟ್ಟಿನಾಯಕನಕೊಪ್ಪಲು ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿ ಹೆಣ್ಣು ಮಕ್ಕಳ ಕರಾಟೆ ಕೌಶಲ್ಯವನ್ನು ವೀಕ್ಷಿಸಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು ಅವರಿಗೆ ಆತ್ಮರಕ್ಷಣೆ ಕಲೆ ಅಗತ್ಯವಾಗಿತ್ತು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯನ್ನು ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಆರಂಭಿಸಿದ್ದು, ಸುಮಾರು ಒಂದು ಸಾವಿರ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳ ಕರಾಟೆ ಕಲೆ ಹಾಗೂ ಸಮವಸ್ತ್ರಕ್ಕಾಗಿ 18ಕೋಟಿ ರೂ.ಗಳನ್ನು ವೆಚ್ಚಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಕರಾಟೆ ಕಲೆಯನ್ನು ಶ್ರದ್ಧೆಯಿಂದ ಕಲಿತರೆ ಬ್ಲಾಕ್ ಬೆಲ್ಟ್ ಪಡೆಯಬಹುದು. ಬ್ಲಾಕ್ ಬೆಲ್ಟ್ ಕಲಿತ ಹೆಣ್ಣುಮಕ್ಕಳು ಎಂಥ ಕಠಿಣ ಸಂದರ್ಭವನ್ನೂ ಎದುರಿಸಬಲ್ಲರು ಎಂದು ಅವರು ಹೇಳಿದರು.

ಬಡವರು, ಆರ್ಥಿಕವಾಗಿ ಹಿಂದುಳಿದವರು, ಅಲೆಮಾರಿಗಳ ಮಕ್ಕಳೇ ವಿಶೇಷವಾಗಿ ಈ ವಸತಿ ಶಾಲೆಗಳಿಗೆ ದಾಖಲಾಗುತ್ತಿದ್ದು ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ವಸತಿಶಾಲೆಗಳನ್ನು ಮತ್ತಷ್ಟು ಬಲಪಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇತ್ತೀಚಿನ ಎಸ್ ಎಸ್ ಎಲ್ ಸಿ ಫಲಿತಾಂಶ ವಸತಿ ಶಾಲೆಯ ಗುಣಮಟ್ಟವನ್ನು ದಾಖಲಿಸಿದೆ ಎಂದ ಅವರು, ವಸತಿ ಶಾಲೆಯಲ್ಲಿ ಓದಿದ ಮಕ್ಕಳು ದೇಶದ ಅತ್ಯುನ್ನತ ಐಐಟಿ, ಐಐಎಂಗಳಲ್ಲಿ ಪ್ರವೇಶ ಪಡೆಯುತ್ತಿರುವುದು ನಮ್ಮ ಸರ್ಕಾರದ ಹೆಮ್ಮೆ ಎಂದು ಅವರು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ವಿವಿಧ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮ ನಂತರ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next