ಶಿವಮೊಗ್ಗ: ಲವ್ ಜಿಹಾದ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಬೇರೆ ಬೇರೆ ಕಡೆ ನಮ್ಮ ಸಹೋದರಿಯರು ಬಲಿಯಾಗಿದ್ದಾರೆ ಎನ್ನುವುದು ಡಿ ಕೆ ಶಿವಕುಮಾರ್ ಅವರಿಗೆ ಗೊತ್ತಿಲ್ಲವೇ? ಅವರಿಗೆ ಗೊತ್ತಿಲ್ಲ ಅಂದರೆ ನಾನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಎಲ್ಲೆಲ್ಲಿ ಮತಾಂತರ ಮಾಡಿ ಹಿಂದೂ ಹೆಣ್ಣು ಮಕ್ಕಳನ್ನು ಮೋಸ ಮಾಡಿದ್ದಾರೆ ಎಂಬುದನ್ನು ತೋರಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿರೋಧ ಮಾಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಆಗುತ್ತಿರುವ ಮತಾಂತರದ ಬಗ್ಗೆ ಡಿಕೆಶಿ ಅವರಿಗೆ ವೀರಶೈವ ಸಮಾಜದವರೇ ನೇರವಾಗಿ ಹೇಳಿದ್ದಾರೆ. ಮುಗ್ಧ ವೀರಶೈವ ಬಂಧುಗಳನ್ನು ಆಸೆ, ಆಮಿಷ ತೋರಿಸಿ ಮತಾಂತರ ಮಾಡಿದ್ದಾರೆ. ಅವರನ್ನು ಮತ್ತೆ ವಾಪಸ್ ನಮ್ಮ ಧರ್ಮಕ್ಕೆ ತರುತ್ತೇವೆ ಎಂಬುದನ್ನು ವೀರಶೈವ ಸಮಾಜದ ಅನೇಕ ಪೂಜ್ಯರು ಹೇಳಿದ್ದಾರೆ. ಡಿಕೆಶಿ ಕೇವಲ ಓಟಿನ ಲೆಕ್ಕ ನೋಡುತ್ತಿದ್ದಾರೆ. ಒಬ್ಬೊಬ್ಬ ವ್ಯಕ್ತಿ ಮತಾಂತರವಾದ ಸಂದರ್ಭದಲ್ಲಿ ಅವರು ಅನುಭವಿಸುವ, ಜೀವನದ ತೊಂದರೆಯನ್ನು ಡಿಕೆಶಿ ಗಮನಿಸಿಲ್ಲ. ಡಿಕೆಶಿ ಅವರೇ ಮತಾಂತರ ಆಗಿರುವ ಹೆಣ್ಣು ಮಕ್ಕಳನ್ನು, ನಮ್ಮ ದೇಶದಿಂದ ವಿದೇಶಕ್ಕೆ ತೆಗೆದುಕೊಂಡು ಮಾರಾಟ ಮಾಡಿರುವ ಹೆಣ್ಣುಮಕ್ಕಳ ಕಷ್ಟ ಕೇಳಿ ತಿಳಿದುಕೊಳ್ಳಿ. ನೀವು ಈ ವಿಷಯ ತಿಳಿದುಕೊಂಡಿದ್ದರೇ, ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆ : ಬಿಎಸ್ ವೈ
ಒಂದೇ ಒಂದು ಧರ್ಮವನ್ನು ಉದ್ದೇಶಿಸಿ ಮತಾಂತರ ಕಾಯ್ದೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹೌದು, ಒಂದು ಧರ್ಮವನ್ನು ಉದ್ದೇಶಿಸಿಯೇ ಈ ಮತಾಂತರ ನಿಷೇಧ ಕಾಯ್ದೆ ತರುತ್ತಿರುವುದು. ಆ ಧರ್ಮದವರು ಹಿಂದೂ ಹೆಣ್ಣುಮಕ್ಕಳು, ಬಡ ಹಿಂದು ಜನರ ಮೇಲೆ ಕಣ್ಣಿಟ್ಟು, ಆಸೆ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವುದು ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಸಮಾಜದ ಕಣ್ಣಿಗೆ ಬಿದ್ದಿದ್ದೆ, ಸಾಧು ಸಂತರ ಕಣ್ಣಿಗೆ ಬಿದ್ದಿದೆ. ತಂದೆ ತಾಯಿಯವರು ನೋವು ಅನುಭವಿಸುತ್ತಿದ್ದಾರೆ. ಸ್ವತಃ ಶಾಸಕ ಗೂಳಿಹಟ್ಟಿ ಶೇಖರ್ ಅವರು ಅವರ ತಾಯಿಯೇ ಮತಾಂತರ ಆಗಿದ್ದನ್ನು ಬಿಡಿಸಿಟ್ಟರು. ಮತಾಂತರ ನಿಷೇಧವನ್ನು ಯಾಕೆ ವಿರೋಧ ಮಾಡುತ್ತಿದ್ದೀರಿ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿ. ಎಲ್ಲಾ ಹಿಂದುಗಳು ಮತಾಂತರ ಆಗಬೇಕಾ ಹೇಳಿ ನೋಡೋಣ. ಪಾಕಿಸ್ತಾನದಲ್ಲಿ ಶೇ.24 ರಷ್ಟು ಹಿಂದುಗಳು ಇದ್ದರು. ಇಂದು ಶೇ.3% ಗೆ ಬಂದಿದ್ದಾರೆ. ಹೊಡೆದು, ಬಡಿದು ಕೊಲೆ ಮಾಡಿದ್ದಾರೆ. ಮತಾಂತರ ಮಾಡಿದ್ದಾರೆ. ಈಗಿರುವಾಗ ನಿಮಗೆ ಏನು ಅನಿಸುವುದಿಲ್ಲವೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಕೇವಲ ಓಟಿಗೋಸ್ಕರ ಕೆಟ್ಟ ರಾಜಕಾರಣ ಮಾಡುತ್ತಿರುವುದನ್ನು ಈ ರಾಜ್ಯದ ಜನ ಇದನ್ನ ಮೆಚ್ಚುತ್ತಾರೆಯೇ? ಕೆಪಿಸಿಸಿ ಅಧ್ಯಕ್ಷರಾಗಿ ಮತಾಂತರದ ಬಗ್ಗೆ ವಿರೋಧ ಮಾಡುತ್ತೇನೆ ಎನ್ನುತ್ತೀರಲ್ಲಾ? ನೀವು ಎಷ್ಟೇ ವಿರೋಧ ಮಾಡಿ, ರಾಜ್ಯದಲ್ಲಿ ಈ ಧರ್ಮವನ್ನು ಉಳಿಸುವ, ನಮ್ಮ ಅಕ್ಕ ತಂಗಿಯರನ್ನು ಉಳಿಸುವ ಪೂರ್ಣ ಬಹುಮತ ಬಿಜೆಪಿಗೆ ಇದೆ. ನಾವು ಇದನ್ನು ವಿಧಾನಸಭೆಯಲ್ಲಿ ಕಾಯ್ದೆಯನ್ನು ಪಾಸ್ ಮಾಡುತ್ತೇವೆ. ರಾಜ್ಯದಲ್ಲಿ ಭಾರತೀಯ ಸಂಸ್ಕೃತಿ ಉಳಿಸುವ ಅನೇಕ ಕಾಯ್ದೆ ತರುತ್ತೇವೆ. ರೈತರಿಗೆ ಅನುಕೂಲ ಆಗುವ, ಶಿಕ್ಷಣದಲ್ಲಿ ಸುಧಾರಣೆಯಾಗುವ, ಕಾರ್ಮಿಕರಿಗೆ ಸುಧಾರಣೆಯಾಗುವ ಕಾಯ್ದೆಗಳನ್ನು ತರುತ್ತೇವೆ ಎಂದು ಈಶ್ವರಪ್ಪ ಹೇಳಿದರು.