Advertisement

ಗೆಲುವಿನ ನಾಗಾಲೋಟ ಖಚಿತ

07:31 PM Mar 03, 2021 | Team Udayavani |

ಶಿವಮೊಗ್ಗ: ಪಕ್ಷದ ಕಾರ್ಯಕರ್ತರ ಶ್ರಮದಿಂದ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ 50 ರಲ್ಲಿ 39 ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಗದ್ದುಗೆ ಏರಿದ್ದಾರೆಂದು ಸಚಿವ ಕೆಎಸ್‌.ಈಶ್ವರಪ್ಪ ಹೇಳಿದರು.

Advertisement

ನಗರದ ಶುಭ ಮಂಗಳ ಸಮುದಾಯ  ಭವನದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಸ್ಪರ್ಧಿಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಕೂಡ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನ ಗಳಿಸಲಿದ್ದು, ಗೆಲುವಿನ ನಾಗಾಲೋಟ ಮುಂದುವರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಮೇಯರ್‌ ಚುನಾವಣೆಗೆ ಸಂಬಂಧಿ ಸಿದಂತೆ ಈಗಾಗಲೇ ಕಾಂಗ್ರೆಸ್‌ ನಾಯಕರ ನಡುವೆ ಗುದ್ದಾಟ ಶುರುವಾಗಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ವೀಕ್ಷಕರನ್ನು ಕಳುಹಿಸುವ ಪರಿಸ್ಥಿತಿಯುಂಟಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ನಿರ್ನಾಮವಾಗಲಿದೆ ಎಂದರು. ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಗೆದ್ದವರು ಜನರ ಋಣ ತೀರಿಸಬೇಕು. ಜನ ಪ್ರತಿನಿಧಿಗಳು ಸಿಟ್ಟಾಗಬಾರದು. ಸೋತವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿ ಮಾಡಿ, ಮುಂದಿನ ಚುನಾವಣೆಯಲ್ಲೂ ಮತ್ತೆ ಆಯ್ಕೆಯಾಗಬೇಕು. ಇದಕ್ಕಾಗಿ ಹೆಚ್ಚಿನ ಅನುದಾನ ಪಡೆಯಲು ಸಂಸದರು, ಶಾಸಕರ ಬೆನ್ನು ಹತ್ತಿ ಎಂದು ಕಿವಿಮಾತು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ಗ್ರಾಮ ಪಂಚಾಯತ್‌ ಗಳಿಗೆ ಅನುದಾನ ಬರುತ್ತದೆ. ಸ್ಥಳೀಯ ಗ್ರಾಮ ಪಂಚಾಯತ್‌ನಿಂದಲೂ ತೆರಿಗೆ ಸಂಗ್ರಹವಾಗುತ್ತದೆ. ಇದರ ಸದ್ಭಳಕೆಯಾಗುವ ರೀತಿ ಮಾಡಬೇಕು ಮತ್ತು ಅನುದಾನ ಯಾವ ರೀತಿ ತರಬೇಕು ಎಂಬ ವಿಷಯದಲ್ಲಿ ಗೆದ್ದ ಗ್ರಾಮ ಪಂಚಾಯತ್‌ ಸದಸ್ಯರು ಮತ್ತು ಅಧ್ಯಕ್ಷ, ಉಪಾಧ್ಯಕ್ಷರಿಗೆ ರಾಜ್ಯದ ಒಟ್ಟೂ 285 ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು. ಒಂದು ಕೇಂದ್ರದಲ್ಲಿ 40 ಜನರಿಗೆ ಅವಕಾಶವಿದ್ದು, ತರಬೇತಿಯನ್ನು ತಪ್ಪಿಸಿಕೊಳ್ಳಬೇಡಿ ಎಂದು ಹೇಳಿದರು.

ಗ್ರಾಮದ ಯಾವೊಬ್ಬ ಹೆಣ್ಣು ಮಕ್ಕಳು ಶೌಚಾಲಯವನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇರಬಾರದು ಎಂದ ಅವರು, ಅದರ ಜೊತೆಗೆ ಪಕ್ಷ ಸಂಘಟನೆಗೆ ಮತ್ತು ಪಕ್ಷದ ಕೆಲಸಕ್ಕೆ ಆದ್ಯತೆ ನೀಡಿ ಎಂದರು.

Advertisement

ಶಾಸಕ ಕೆ.ಬಿ. ಅಶೋಕ್‌ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕಟ್ಟಡಕ್ಕೆ ತಳಪಾಯ ಗಟ್ಟಿ ಇರುವ ರೀತಿಯಲ್ಲಿಯೇ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಗೆಲುವು ಸಾ ಧಿಸಿದರೆ ಮುಂದಿನ ಎಲ್ಲಾ ಚುನಾವಣೆಯಲ್ಲೂ ಗೆಲವು ಸಾಧಿಸಬಹುದು. ಇತ್ತೀಚಿನ ಚುನಾವಣೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದ್ದು, ಸರ್ಕಾರದ ಎಲ್ಲಾ ಯೋಜನೆಗಳನ್ನು ನಾಗರೀಕರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆಯನೂರು ಮಂಜುನಾಥ್‌, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಬಿಜೆಪಿ ಪ್ರಮುಖರಾದ ಭಾನುಪ್ರಕಾಶ್‌, ಕೆ.ಜಿ. ಕುಮಾರಸ್ವಾಮಿ, ಪವಿತ್ರಾ ರಾಮಯ್ಯ, ಸಿದ್ರಾಮಣ್ಣ, ಜ್ಯೋತಿ ಪ್ರಕಾಶ್‌, ಕೆ.ಇ. ಕಾಂತೇಶ್‌, ಗೀತಾ ಜಯಶೇಖರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next