Advertisement

ಸಚಿವ ಈಶ್ವರ ಖಂಡ್ರೆ ಸಾಧನೆ ಶೂನ್ಯ: ಸಿದ್ರಾಮ್‌ ಆರೋಪ

01:35 PM Jan 04, 2018 | Team Udayavani |

ಬೀದರ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಾಧನೆ ಜಿಲ್ಲೆಯಲ್ಲಿ ಶೂನ್ಯ. ಸಾವಿರಾರು ಕೋಟಿ ರೂ. ವೆಚ್ಚದ
ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕೇವಲ ರಾಜಕೀಯ ಗಿಮಿಕ್‌ ಆಗಿದೆ ಎಂದು ಬಿಜೆಪಿ ಕಬ್ಬು ಬೆಳೆಗಾರರ ರಾಜ್ಯ ಪ್ರಕೋಷ್ಟದ ಸಂಚಾಲಕ ಡಿ.ಕೆ. ಸಿದ್ರಾಮ್‌ ಆರೋಪಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಜಿಲ್ಲಾ ಆಸ್ಪತ್ರೆ ಕಟ್ಟಡ ಉದ್ಘಾಟಿಸಲಾಗಿದೆ. ಜಿಲ್ಲಾ ಆಡಳಿತ ಕಚೇರಿ ಸಂಕೀರ್ಣಕ್ಕಾಗಿ ಸ್ಥಳ ಆಯ್ಕೆ ಅಂತಿಮಗೊಳಿಸಲಾಗಿಲ್ಲ. ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ನಿರ್ಮಾಣ ಇನ್ನೂ ಶುರುವಾಗಿಲ್ಲ. ಹೀಗೆ ಶಂಕುಸ್ಥಾಪನೆ ನೆರವೇರಿಸಲಾದ ಹಲವು ಯೋಜನೆಗಳು ಇದ್ದಲ್ಲಿಯೇ ಉಳಿದುಕೊಂಡಿವೆ ಎಂದರು.

ಖಂಡ್ರೆ ವೈಫಲ್ಯಕ್ಕೆ ಸಾಕ್ಷಿ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಬಿಎಸ್‌ಎಸ್‌ಕೆ ಕಾರ್ಖಾನೆ ಮುಚ್ಚುವ ಸ್ಥಿತಿಗೆ ತಲುಪಿರುವುದು ಸಚಿವ ಖಂಡ್ರೆ ಅವರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕಾರ್ಖಾನೆ ಹಿಂದೆ ಅಧ್ಯಕ್ಷರಾಗಿದ್ದ ಸಚಿವ ಖಂಡ್ರೆ ಅವರಿಗೆ ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆ ಮಾಡಿಸದಿರುವುದು ದುರ್ದೈವದ ಸಂಗತಿ. 10 ಕೋಟಿ ರೂ. ಸಾಲಕ್ಕೆ ಸರ್ಕಾರ ಖಾತರಿ ನೀಡಿದೆ. ಆದರೆ, ಅಪೆಕ್ಸ್‌ ಬ್ಯಾಂಕ್‌ ಸಾಲ ನೀಡಲು ನಿರಾಕರಿಸಿದೆ. ಸರ್ಕಾರವೇ ದುರ್ಬಲವಾಗಿದೆಯೋ ಅಥವಾ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಲಾಗುತ್ತಿದೆಯೋ ಎನ್ನುವುದು ತಿಳಿಯದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಎಂಜಿಎಸ್‌ಎಸ್‌ಕೆ ಕಾರ್ಖಾನೆ 1.78 ಲಕ್ಷ ಟನ್‌, ಎನ್‌ಎಸ್‌ಎಸ್‌ಕೆ 1.65 ಲಕ್ಷ ಟನ್‌, ಭಾಲ್ಕೇಶ್ವರ ಕಾರ್ಖಾನೆ 1.64 ಲಕ್ಷ ಟನ್‌, ಬಿಕೆಎಸ್‌ಕೆ 81 ಸಾವಿರ ಟನ್‌ ಕಬ್ಬು ನುರಿಸಿದೆ. ಆದರೆ, ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿರುವ ಬಿಎಸ್‌ಎಸ್‌ಕೆ ಕೇವಲ 11,251 ಟನ್‌ ಕಬ್ಬು ನುರಿಸಿದೆ. ವರ್ಷದಿಂದ ಸಿಬ್ಬಂದಿಗೆ ವೇತನ ನೀಡಲಾಗಿಲ್ಲ ಎಂದು ತಿಳಿಸಿದರು.

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಸಾಗಿಸಿದ ರೈತರಿಗೆ ಸದ್ಯ ಟನ್‌ಗೆ ಬರೀ 1900 ರೂ. ಪಾವತಿಸಿವೆ. ಪ್ರತಿ ಟನ್‌ ಕಬ್ಬಿಗೆ 2200 ರೂ. ಕೊಡಿಸುವುದಾಗಿ ಸಚಿವ ಈಶ್ವರ ಖಂಡ್ರೆ ಅವರು ಈ ಹಿಂದೆ ರೈತ ನಾಯಕರಿಗೆ ಭರವಸೆ ನೀಡಿದ್ದರು. ಈ ಭರವಸೆ ಉಳಿಸಿಕೊಳ್ಳಬೇಕು. ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟದಿಂದ ಹೊರಬರಲು ಸಾಧ್ಯ ಎಂದು ಒತ್ತಾಯಿಸಿದರು.

Advertisement

ರಸ್ತೆ ಕಾಮಗಾರಿ ತನಿಖೆ ಆಗಲಿ: ಭಾಲ್ಕಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಕುರಿತು ತನಿಖೆ ನಡೆಸಬೇಕು. ಭಾಲ್ಕಿಯಲ್ಲಿ ಟೆಂಡರ್‌ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಕೇವಲ ಇಬ್ಬರು ಗುತ್ತಿಗೆದಾರರಿಗೆ ಎಲ್ಲ ಕೆಲಸ ಕೊಡಿಸಲಾಗುತ್ತಿದೆ. ಬೇರೆ ಬೇರೆ ಕಾಮಗಾರಿಗಳ ಕುರಿತು ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ. ಸಚಿವರ ಒತ್ತಡದಿಂದಾಗಿ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ತಿಳಿಸಿದರು. ಭಾಲ್ಕಿಯಲ್ಲಿ ಮರಾಠಾ ಸಮಾಜವನ್ನು ಮೂಲೆಗುಂಪು ಮಾಡಲು ಸಚಿವ ಖಂಡ್ರೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಮರಾವ ವರವಟ್ಟಿಕರ್‌, ಶಿವಾಜಿರಾವ ಭೋಸ್ಲೆ, ಶಾಂತವೀರ ಕೇಸ್ಕರ್‌, ಪ್ರತಾಪ ಪಾಟೀಲ, ಚಂದ್ರಕಾಂತ ಪಾಟೀಲ, ಸುರೇಶ ಕಾನೇಕರ್‌, ಶರಣಪ್ಪ ಕಡಗಂಚಿ ಸುದ್ದಿಗೋಷ್ಠಿಯಲ್ಲಿದ್ದರು.

ಬಿಜೆಪಿ ಬಿಡಲ್ಲ-ಬಿಎಸ್‌ವೈ ಕ್ಷಮೆ ಕೋರುವೆ 
ಬೀದರ: ಟಿಕೆಟ್‌ ಘೋಷಣೆ ವಿಷಯ ಸಂಬಂಧ ಬಿಜೆಪಿ ಪರಿವರ್ತನಾ ಯಾತ್ರೆ ಸಮಯದಲ್ಲಿ ಬೇಸರವಾಗಿದ್ದು ನಿಜ. ಅದಕ್ಕಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದ್ದೆ. ಬಿಎಸ್‌ ವೈ ನನಗೆ ತಂದೆ ಸಮಾನರಿದ್ದು, ಮಾತನಾಡಿದ್ದಕ್ಕಾಗಿ ವಿಷಾದವಿದೆ ಮತ್ತು ಕ್ಷಮೆಯನ್ನೂ ಕೇಳುತ್ತೇನೆ ಎಂದು ಡಿ.ಕೆ. ಸಿದ್ರಾಮ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂ ಭಾಲ್ಕಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ. ಸರ್ವೆಯಲ್ಲಿ ನನ್ನ ಹೆಸರೇ ಮುಂದಿದೆ. ಆದರೆ, ಟಿಕೆಟ್‌ ಸಿಗದಿದ್ದರೆ ನಾನೇನು ಪಕ್ಷ ಬಿಡಲ್ಲ. ಬಿಜೆಪಿಯಲ್ಲಿಯೇ ಇದ್ದು, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ನನಗೆ ಟಿಕೆಟ್‌ ಬೇಡ ಎಂದಾದರೆ ಮರಾಠಾ ಸಮಾಜದ ಮುಖಂಡರಿಗೆ ಟಿಕೆಟ್‌ ಕೊಡಬೇಕು ಎಂದು ಒತ್ತಾಯಿಸಿದರು.

ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ನನಗಿಂತ 20 ಸಾವಿರ ಕಡಿಮೆ ಮತ ಪಡೆದಿದ್ದು, ಬೀದರ ಉಪ ಚುನಾವಣೆಯಲ್ಲೂ ಅವರು ಪರಾಭವಗೊಂಡಿದ್ದಾರೆ. ಹೀಗಾಗಿ ಭಾಲ್ಕಿ ಕ್ಷೇತ್ರದ ಟಿಕೆಟ್‌ ತಮಗೇ ಸಿಗಬೇಕು. ಸತತ ಮೂರು ಚುನಾವಣೆಯಲ್ಲಿ ಪರಾಭವಗೊಂಡಿರುವ ಪ್ರಕಾಶ ಖಂಡ್ರೆ ಅವರಿಗೆ ಕ್ಷೇತ್ರದಲ್ಲಿ ಜನ ಬೆಂಬಲ ಇಲ್ಲ. ಪರಿವರ್ತನಾ ಯಾತ್ರೆಯಲ್ಲಿ ಅವರ ಹೆಸರು ಪ್ರಕಟಿಸಿದರೂ ಎಲ್ಲಿಯೂ ಸಂಭ್ರಮಾಚರಣೆ ನಡೆದಿಲ್ಲ. 2013ರ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಮತ್ತು ಪ್ರಕಾಶ ಖಂಡ್ರೆ ಒಂದಾಗಿದ್ದರಿಂದಲೇ ಕೆಜೆಪಿಯಿಂದ ಸ್ಪರ್ಧಿಸಿದ್ದ ತಾವು ಸೋಲುಣ್ಣಬೇಕಾಯಿತು ಎಂದು ಸಿದ್ರಾಮ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next