Advertisement

ಹೊಸೂರ-ಕಾರ್ಣಿಕ ಕೊಡುಗೆ ಅಪಾರ: ಹಿಮ್ಮಡಿ

06:21 PM Nov 16, 2021 | Team Udayavani |

ಬೆಳಗಾವಿ: ಹಿರಿಯ ಸಾಹಿತಿ ಪ್ರೊ. ಜ್ಯೋತಿ ಹೊಸೂರ ಅವರು ಅಧ್ಯಾಪನ, ಸಂಶೋಧನ, ಪ್ರಕಾಶನ ಮತ್ತು ಸಂಘಟನೆಯ ಮೂಲಕ ಕನ್ನಡ ನಾಡು ನುಡಿಗೆ ಮತ್ತು ವೈಚಾರಿಕ ಚಿಂತನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಚಟುವಟಿಕೆಗೆ ಜಾನಪದ ಮಂಟಪ ಸ್ಥಾಪಿಸಿದ್ದ ಅವರು, ಪುಸ್ತಕ ಮತ್ತು ಪತ್ರಿಕೆ ಪ್ರಕಟಣೆಗೆ ಕಾಲಗತಿ ಪ್ರಕಾಶನ ಸ್ಥಾಪಿಸಿದ್ದರು ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.

Advertisement

ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ನಿಧನರಾದ ಪ್ರೊ. ಜ್ಯೋತಿ ಹೊಸೂರ ಹಾಗೂ ಡಾ. ಸಿದ್ರಾಮ ಕಾರ್ಣಿಕ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಶೋಧಕ ಶಂಬಾ ಜೋಶಿ ಅವರ ಅನುಯಾಯಿಯಾಗಿದ್ದ ಜ್ಯೋತಿ ಹೊಸೂರ ಅವರು ವೈಚಾರಿಕ ಚಿಂತನೆಗಳ ಪ್ರಸಾರಕ್ಕೆ ಮಾನವ ಧರ್ಮ ಪ್ರತಿಷ್ಠಾನ ಸ್ಥಾಪಿಸಿ ಸಂಕುಚಿತತೆಯನ್ನು ಮೀರಿದ ಅಪ್ಪಟ ಮಾನವತಾ ಧರ್ಮದ ಪ್ರತಿಪಾದಕರಾಗಿದ್ದರು ಎಂದರು.

ಜ್ಯೋತಿ ಹೊಸೂರ ಅವರು ವಿಶ್ವ ಮಾನವತೆಯ ಪ್ರತಿಪಾದಕರಾಗಿದ್ದರೆ ಸಣ್ಣ ವಯಸ್ಸಿನಲ್ಲೇ ನಿಧನರಾದ ಬಂಡಾಯ ಸಾಹಿತಿ ಡಾ. ಸಿದ್ರಾಮ ಕಾರ್ಣಿಕ್‌ ಅವರು ಅಂತಹ ವಿಚಾರಗಳ ಅನುಷ್ಠಾನಕ್ಕಾಗಿ ದುಡಿಯುವವರಾಗಿದ್ದರು. ಅಧ್ಯಾಪನ, ಚಳವಳಿ, ಸಾಹಿತ್ಯ, ಸಿನಿಮಾ, ನಾಟಕ, ಅನುವಾದ ಹೀಗೆ ಏಕ ಕಾಲಕ್ಕೆ ಅನೇಕ ಕ್ಷೇತ್ರಗಳಲ್ಲಿ ದುಡಿದು ಸಾಧನೆ ತೋರಿದ ಸಿದ್ರಾಮ ಅವರು ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.

ಕವಿ ನದೀಮ್‌ ಸನದಿ ಮಾತನಾಡಿ, ಜ್ಯೋತಿ ಹೊಸೂರ ಅವರ ಮಹತ್ವಾಕಾಂಕ್ಷೆಯ ಕೈದೀವಿಗೆಯಾಗಿರುವ ಕಾಲಗತಿ ಪ್ರಕಾಶನವನ್ನು ಅವರ ಕುಟುಂಬ ಸದಸ್ಯರ ಒಪ್ಪಿಗೆಯ ಮೇರೆಗೆ ನಾವೇ ಮುಂದುವರೆಸುವ ಸಂಕಲ್ಪ ಮಾಡಿದ್ದೇವೆ. ಅವರು ಇಲ್ಲಿಯವರೆಗೂ ಎಳೆದು ತಂದ ರಥವನ್ನು ಖಂಡಿತವಾಗಿಯೂ ನಾವು ಮುಂದಕ್ಕೊಯ್ಯುತ್ತೇವೆ ಎಂದು ಹೇಳಿದರು.

ಬಂಡಾಯ ಸಂಘಟನೆಯ ಶಂಕರ ಬಾಗೇವಾಡಿ, ಡಾ. ಅಡಿವೆಪ್ಪ ಇಟಗಿ, ಯುವಕವಿ ಸಂತೋಷ ನಾಯಕ, ರಮೇಶ್‌ ದಾಸನಟ್ಟಿ ಅವರು ಜ್ಯೋತಿ ಹೊಸೂರ ಹಾಗೂ ಸಿದ್ರಾಮ ಕಾರ್ಣಿಕ್‌ ಅವರ ಸಾಹಿತ್ಯದ ಸಾಧನೆಯನ್ನು ಸ್ಮರಿಸಿದರು. ಕಾರ್ಯ‌ಕ್ರಮದಲ್ಲಿ ರಾಜೇಂದ್ರ ಖೆಮಲಾಪುರೆ, ಪ್ರೊ. ಗುರುರಾಜ ವಾಲೀಕಾರ, ನಾಗಪ್ಪ ಕೊಡ್ಲಿ, ಪ್ರಕಾಶ ಕುರಗುಂದ, ಸಾವಕ್ಕ ದೊಡಮನಿ, ಪಾಂಡುರಂಗ ಗಾಣಿಗೇರ, ಶಾನೂರ ಮಸ್ತಿ, ಪ್ರಕಾಶ ಭೂಮಣ್ಣವರ ಮುಂತಾದವರು ಉಪಸ್ಥಿತರಿದ್ದರು. ಬಾಲಕೃಷ್ಣ ನಾಯಕ ಮತ್ತು ನಿಂಗಪ್ಪ ಮಸ್ತಿ ತತ್ವಪದ ಹಾಡಿ ದರು. ಡಾ. ಸುನಿತಾ ಮಿರಾಸಿ ಸ್ವಾಗತಿಸಿದರು, ದಿಲಶಾಬೇಗಮ್‌ ನದಾಫ ವಂದಿಸಿದರು. ಜಿಲ್ಲಾ ಸಂಚಾಲಕರಾದ ದೇಮಣ್ಣಾ ಸೊಗಲದ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next