Advertisement

ಡಯಾಲಿಸಿಸ್‌ ಘಟಕ ಸ್ಥಾಪನೆಗೆ ನಿರ್ಧಾರ

11:49 AM Sep 12, 2017 | Team Udayavani |

ಬೀದರ: ಗುರುಪಾದಪ್ಪಾ ನಾಗಮಾರಪಳ್ಳಿ ಮಲ್ಟಿ ಸುಪರ್‌ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಈ ವರ್ಷದಿಂದಲೇ ಮೂತ್ರಪಿಂಡ ಡಯಾಲಿಸಿಸ್‌ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಆಸ್ಪತ್ರೆಯ 4ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಡಯಾಲಿಸಿಸ್‌ ಘಟಕ ಇದೆ. ನಾಗಮಾರಪಳ್ಳಿ ಆಸ್ಪತ್ರೆಯಲ್ಲೂ ಈ ಘಟಕ ಆರಂಭಿಸಲಿರುವುದರಿಂದ ಮೂತ್ರಪಿಂಡ ಸಮಸ್ಯೆ ಇರುವ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಿ, ಬೇರೆ ನಗರಗಳಿಗೆ ಹೋಗುವುದು ತಪ್ಪಲಿದೆ ಎಂದರು.

ತಾಲೂಕಿನ ಹೊನ್ನಿಕೇರಿ ಸಮೀಪದ 70 ಎಕರೆ ಪೈಕಿ 25 ಎಕರೆ ಪ್ರದೇಶದಲ್ಲಿ ನಿಗರ್ಸ ಚಿಕಿತ್ಸಾಲಯ ಆರಂಭಿಸಲು ಯೋಜಿಸಲಾಗಿದೆ. ಉಳಿದ ಸ್ಥಳದಲ್ಲಿ 350 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣ, ವೈದ್ಯಕೀಯ ಕಾಲೇಜು, ಬಿಎಸ್‌ಸಿ ನರಸಿಂಗ್‌ ಹಾಗೂ ಫಾರ್ಮಸಿ ಕಾಲೇಜುಗಳನ್ನು ಶುರು ಮಾಡುವ ಆಲೋಚನೆ ಇದೆ ಎಂದು ಹೇಳಿದರು.

ಆಸ್ಪತ್ರೆಯನ್ನು ಲಾಭವೂ ಇಲ್ಲದಂತೆ, ನಷ್ಟವೂ ಆಗದಂತೆ ಜನರಿಗೆ ಆಸರೆಯಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುತ್ತಿದೆ. ಶೇರುದಾರರು ಹಾಗೂ ವಸತಿ ಗೃಹಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳಿಗೆ ಶೇ. 20 ಹಾಗೂ ಹಿರಿಯ ನಾಗರಿಕರಿಗೆ ಚಿಕಿತ್ಸೆಯಲ್ಲಿ ಶೇ.10ರಷ್ಟು ರಿಯಾಯತಿ ಕೊಡಲಾಗುತ್ತಿದೆ ಎಂದು ಹೇಳಿದರು.

2016-17ನೇ ಸಾಲಿನಲ್ಲಿ 50 ಸಾವಿರಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಲಾಗಿದ್ದು, 1111 ರೋಗಿಗಳ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ವೈದ್ಯರಿಗೆ ವೈದ್ಯಕೀಯ ಕ್ಷೇತ್ರದ ಅತ್ಯಾಧುನಿಕ ಆವಿಷ್ಕಾರಗಳ ಪರಿಚಯ ಮಾಡಿಕೊಡಲಾಗಿದೆ. ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಅನೇಕ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. ಆಸ್ಪತ್ರೆ 87ಲಕ್ಷ ರೂ. ಲಾಭಗಳಿಸಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನರಿಗೆ ಇನ್ನಷ್ಟು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಿದೆ ಎಂದರು.

Advertisement

ಆಸ್ಪತ್ರೆಯಲ್ಲಿ 16 ವೈದ್ಯರು ಸೇರಿ 100 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆಯೂ ಸೇವೆ ಇದೆ. ವಿಶೇಷ ನಿಗಾ ಘಟಕ, ಮಕ್ಕಳ ನಿಗಾ ಘಟಕ, 2 ವಿಶೇಷ ವೆಂಟಿಲೇಟೆಡ್‌ ಆಂಬ್ಯೂಲೆನ್ಸ್‌ ಸೇರಿ 3 ಆಂಬ್ಯೂಲೆನ್ಸ್‌ಗಳು ಇವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಆಸ್ಪತ್ರೆ ಜನಸ್ನೆಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಸ್ಪತ್ರೆ ಜಾರಿಗೆ ತಂದಿರುವ 2000 ರೂ. ವೆಚ್ಚದಲ್ಲಿ ಸಾಮಾನ್ಯ ಹೆರಿಗೆ ಮತ್ತು 10,000 ರೂ. ವೆಚ್ಚದಲ್ಲಿ ಸಿಸೆರಿಯನ್‌ ಯೋಜನೆ ಜಿಲ್ಲೆಯ ಜನರಿಗೆ ವರದಾನ ವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಿ.ಕೆ. ಸಿದ್ರಾಮ, ಚಂದ್ರಕಾಂತ ಗುದಗೆ, ಕಾಶಪ್ಪಾ ಧನ್ನೂರ, ವಿಜಯಕುಮಾರ ಕೋಟೆ, ಭೀಮರಾವ್‌ ಪಾಟೀಲ್‌, ರಾಮರಾವ್‌ ಬಿರಾದರ, ಸುನೀಲ ಪಾಟೀಲ, ವಿಜಯಕುಮಾರ ಎಸ್‌. ಪಾಟೀಲ ಗಾದಗಿ, ರಾಮದಾಸ ತುಳಸಿರಾಮ, ಶಕುಂತಲಾ ಬೆಲ್ದಾಳೆ, ವಿಜಯಲಕ್ಷ್ಮೀ ಹುಗಾರ, ಡಾ| ರಜನೀಶ ವಾಲಿ, ಸೈಯದ ಖೀಜರುಲ್ಲಾ, ಉದಯಭಾನು ಹಲವಾಯಿ, ಎಚ್‌.ಎಸ್‌. ಮಾರ್ಟಿನ್‌, ಸಿಇಒ ಎನ್‌. ಕೃಷ್ಣಾರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next