ಬೀದರ: ಮುಷ್ಠಿ ಫಂಡ್‌ನಿಂದ ಲಿಂ. ಪಟ್ಟದ್ದೇವರು ಸ್ಥಾಪಿಸಿದ್ದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಹೊಡೆದುಕೊಂಡಿರುವ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ದೊಡ್ಡ ವಂಚಕ ಮತ್ತು ಮೋಸಗಾರ. ಅವರು ಮಾನಸಿಕ ಹತಾಶರಾಗಿದ್ದು, ಆರೋಪಕ್ಕೆ ಉತ್ತರಿಸುವ ಬದಲು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂಸದ ಭಗವಂತ ಖೂಬಾ ಮತ್ತು ಪ್ರಕಾಶ ಖಂಡ್ರೆ ಗುತ್ತಿಗೆದಾರರಾಗಿದ್ದು, ಮೋಸ-ವಂಚನೆ ಮಾಡುವವರಿಂದ ಪಾಠ ಕಲಿಯಬೇಕಿಲ್ಲ’ ಎಂದು ಹೇಳುವ ಮೂಲಕ ನಿರ್ಮಾಣ ಕಾರ್ಯದಲ್ಲಿರುವ ಗುತ್ತಿಗೆದಾರರ ಬಗ್ಗೆ ಕೀಳು ಮಟ್ಟದ ಶಬ್ದ ಬಳಕೆ ಮಾಡಿದ್ದಾರೆ. ಆದರೆ, ನಾವು ಯಾರಿಗೂ ವಂಚನೆ ಮಾಡಿಲ್ಲ ಎಂದರು.
ಮನೆಗಳ ಮಂಜೂರಿ ಹಾಗೂ ಕಾಮಗಾರಿ ಆದೇಶ ಪತ್ರ ನೀಡುವ ಅಧಿಕಾರ ಶಾಸಕ ಸೇರಿ ಯಾವುದೇ ಚುನಾಯಿತ ಪ್ರತಿನಿಧಿಗಳಿಗೆ ಇಲ್ಲ. ಆದರೆ, ಭಾಲ್ಕಿ ಕ್ಷೇತ್ರದಲ್ಲಿ ಸಾವಿರಾರು ಬಡ ಕುಟುಂಬಗಳಿಗೆ ಕ್ಷೇತ್ರದ ಶಾಸಕರಾದ ಸಚಿವ ಈಶ್ವರ ಆದೇಶ ಪತ್ರವನ್ನು ತಮ್ಮ ಲೆಟರ್‌ಹೆಡ್‌ನಲ್ಲಿ ಮುದ್ರಿಸಿ ಸಿಎಂ ಮತ್ತು ಸಂಬಂಧಿತ ಸಚಿವರ ಭಾವಚಿತ್ರ ಹಾಕಿಸಿ ಹಂಚಿಕೆ ಮಾಡಿ ಜನರಿಗೆ ಮೋಸ ಮಾಡಿದ್ದಾರೆ. ಸಚಿವರು ನೀಡಿರುವ ಈ ಮಂಜೂರಾತಿ ಪತ್ರಗಳಿಗೆ ಬೆಲೆ ಇಲ್ಲ. ಫಲಾನುಭವಿಗಳು ತಮ್ಮ ಪ್ರತಿನಿಧಿಯನ್ನು ನಂಬಿ ಪಡೆದ ಮನೆಗಳಿಗೆ ಸರ್ಕಾರದಿಂದ ಯಾವುದೇ ಹಣ ಸಿಗಲ್ಲ. ಇದರಿಂದ ಫಲಾನುಭವಿಗಳು ಬೀದಿಗೆ ಬಂದು ನಿಲ್ಲುವಂತಾಗಿದೆ ಎಂದು ಹೇಳಿದರು.
ಈ ತಮ್ಮ ಆರೋಪದ ಬಗ್ಗೆ ಈಶ್ವರ ಖಂಡ್ರೆ ಅವರು ಪ್ರತಿಕ್ರಿಯೆ ನೀಡುವುದನ್ನು ಬಿಟ್ಟು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜೀವಗಾಂಧಿ ವಸತಿ ನಿಗಮದ ಪ್ರಕಾರ ಕ್ಷೇತ್ರದಲ್ಲಿ ಕೇವಲ 1,686 ಮನೆಗಳಿಗೆ ಮಾತ್ರ ಜಿಪಿಎಸ್ ಆಗಿದೆ. ಆದರೆ, 24 ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಶಾಸಕರು ಸುಳ್ಳು ಹೇಳಿಕೆ ನೀಡಿದ್ದಾರೆ ಮತ್ತು ತಮ್ಮ ಹಿಂಬಾಲಕರ ಮೂಲಕ ಫಲಾನುಭವಿಗಳಿಂದ 30 ಸಾವಿರ ರೂ. ಹಣ ವಸೂಲಿಗೆ ಇಳಿದಿದ್ದಾರೆ ಎಂದು ಆರೋಪಿಸಿದ ಪ್ರಕಾಶ ಅವರು, ಈಶ್ವರ ಖಂಡ್ರೆ ಒಬ್ಬರು “ತಂದೆ ಗಳಿಕೆಯ ಮನುಷ್ಯ, ಅವರ ಗಳಿಕೆ ಏನೂ ಇಲ್ಲ’ ಎಂದು ಲೇವಡಿ ಮಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲೂ ಮಂಜೂರಾದ ಮನೆಗಳ ಹಂಚಿಕೆ ವಿಷಯದಲ್ಲಿ ಅಂದು ಈಶ್ವರ ಅವರು ಲೋಕಾಯುಕ್ತ ಕೇಸ್ ಹಾಕಿಸಿ ಅಡ್ಡಪಡಿಸಿದ್ದರು. ಈಗ ಫಲಾನುಭವಿಗಳು ಮನೆ ಬಿಚ್ಚಿಕೊಂಡು ಬೀದಿಗೆ ಬರುವಂತಾಗಿದೆ. ತಾಕತ್ತಿದ್ದರೆ ಮನೆಗಳನ್ನು ರದ್ದು ಮಾಡಿ ತೋರಿಸಲಿ ಎಂದು ಈಶ್ವರ ಸವಾಲು ಹಾಕಿದ್ದಾರೆ. ಆದರೆ, ನಾವು ಹಾಗೆ ಮಾಡದೇ, ಸಂತ್ರಸ್ತ ಫಲಾನುಭವಿಗಳ ಜತೆಗೆ ನಿಲ್ಲುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಜಯಕುಮಾರ ಕಾಂಗೆ, ಬಾಬುರಾವ್ ಕಾರಬಾರಿ, ಜಯರಾಜ ಬುಕ್ಕಾ, ಗೋವಿಂದರಾವ್ ಬಿರಾದಾರ, ಬಸವರಾಜ ಜೋಜನಾ ಮತ್ತಿತರರು ಇದ್ದರು.
ಭಾಲ್ಕಿ ಪಟ್ಟಣದ ಉಪನ್ಯಾಸಕರ ಬಡಾವಣೆಯಿಂದ ತಾಲೂಕಿನ ತಳವಾಡ ಗ್ರಾಮದ ವರೆಗೆ ಟೆಂಡರ್ ಕರೆಯದೇ ಸುಮಾರು 1.90 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರು ತಮ್ಮ ಹಿಂಬಾರಕರ ಮೂಲಕ ಕೆಲಸ ಆರಂಭಿಸಿದ್ದಾರೆ. ಆದರೆ, ಶಾಸಕರು ಮಾತ್ರ ಇನ್ನೂ ಕೆಲಸ ಆರಂಭವಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ತಾಕತ್ತಿದ್ದರೆ ಈ ವಿಷಯ ಸಂಬಂಧ ಅದೇ ರಸ್ತೆ ಮೇಲೆ ಹೇಳಿಕೆ ನೀಡಲಿ, ಅವರೇ ದಿನ ನಿಶ್ಚಯ ಮಾಡಲಿ. ನಾನು ಸಿದ್ದನಿದ್ದೇನೆ. ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಯಾವುದೇ ಒಳ ಜಗಳ, ಗೊಂದಲ ಇಲ್ಲ. ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ ಅವರೇ ಕಣಕ್ಕಿಳಿಯಲಿದ್ದಾರೆ.
ಪ್ರಕಾಶ ಖಂಡ್ರೆ, ಮಾಜಿ ಶಾಸಕ