ಬೀದರ: ರಾಮ ಮಂದಿರ ನಿರ್ಮಾಣ ಕುರಿತು ಲೋಕಸಭೆಯಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆಯುವುದಾಗಿ ಸಂಸದ ಭಗವಂತ ಖೂಬಾ ಹೇಳಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ವಿಶ್ವ ಹಿಂದು ಪರಿಷದ್ ವತಿಯಿಂದ ಆಯೋಜಿಸಿದ್ದ ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಕುರಿತ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ರಾಮ ಮಂದಿರ ನಿರ್ಮಾಣ ಕುರಿತು ಜನರಲ್ಲಿರುವ ಕಿಚ್ಚು, ಭಾವನೆ ತಿಳಿದುಕೊಂಡಿದ್ದೇನೆ. ಬರುವ ದಿನಗಳಲ್ಲಿ ಈ ಕುರಿತು ಲೋಕಸಭೆಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆಯುವುದಾಗಿ ತಿಳಿಸಿದರು.
ಡಾ| ಹಣಮತರಾವ್ ಮಾತನಾಡಿ, ಸಂಘ ಪರಿವಾರ ಯಾರಿಗೂ ತೊಂದರೆ ನೀಡಿಲ್ಲ. ಕಾರಣ ಅಲ್ಲಿನ ಮುಸ್ಲಿಂ ಸಮಾಜದವರು ಕೂಡ ರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದಾರೆ. ಆರದೆ, ರಾಜಕೀಯ ವ್ಯಕ್ತಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಡಾ| ಮಲ್ಲಾ ಜೀ ಮಾತನಾಡಿ, ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ನಾವು ಹೋರಾಟ ಮಾಡುವ ದಿನಗಳು ಬರುತ್ತಿರುವುದು ನೋಡಿದರೆ ಬೇಸರವಾಗುತ್ತಿದೆ. ರಾಮ ಮಂದಿರ ನಿರ್ಮಿಸಿ ದೇಶದ ಕೀರ್ತಿ ಹೆಚ್ಚಿಸಬೇಕಾಗಿದೆ ಎಂದರು. ಹಾರಕೂಡ ಡಾ| ಚನ್ನಾವೀರ ಶಿವಾಚಾರ್ಯರು, ಭಾತಂಬ್ರಾ ಶಿವಯೋಗೇಶ್ವರ ಮಹಾಸ್ವಾಮಿಗಳು, ಮಹೇಕರ್ ರಾಜೇಶ್ವರ ಶಿವಾಚಾರ್ಯರು, ರಾಜೇಶ್ವರದ ಘನಲಿಂಗರುದ್ರಮುನಿ ಶಿವಾಚಾರ್ಯರು, ಡಾ| ರಾಜೇಶ್ವರ ಸ್ವಾಮಿ ಗೋರ್ಟಾ, ಸುಧಾಕಾರ ದೇಶಪಾಂಡೆ, ಜ್ಯೋತಿರ್ಮಯಾನಂದ ಸ್ವಾಮೀಜಿ, ಈಶ್ವರ ಸಿಂಗ್ ಠಾಕೂರ್, ಡಾ| ಶೈಲೇಂದ್ರ ಬೆಲ್ದಾಳೆ ಹಾಗೂ ಅನೇಕ ಮುಖಂಡರು ಇದ್ದರು.