Advertisement

ವಾಸ್ತವ ಸುದ್ದಿಗೆ ಮಾಧ್ಯಮ ಮಹತ್ವ ನೀಡಲಿ: ಪಾಟೀಲ

11:30 AM Jul 30, 2018 | Team Udayavani |

ಬೀದರ: ಸಾರ್ವಜನಿಕರು ಸುದ್ದಿ ಮಾಧ್ಯಮಗಳ ಮೇಲೆ ಸಾಕಷ್ಟು ನಂಬಿಕೆ ಇಟ್ಟಿರುವುದರಿಂದ ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳು ವಾಸ್ತವ ಸುದ್ದಿಗಳಿಗೆ ಮಹತ್ವ ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ ಪಾಟೀಲ ಹೇಳಿದರು.

Advertisement

ಕರ್ನಾಟಕ ರಾಜ್ಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಸಂಪಾದಕರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರೇಕಿಂಗ್‌ ನ್ಯೂಸ್‌ಗಳನ್ನು ಕೊಡುವ ಭರದಲ್ಲಿ ವಾಸ್ತವಾಂಶಗಳನ್ನು ತಿಳಿಯದೇ ಸುದ್ದಿಗಳನ್ನು ಪ್ರಸಾರ ಮಾಡುವುದರಿಂದ ಸಾಕಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಪತ್ರಕರ್ತರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. 

ಅನಗತ್ಯ ಸುದ್ದಿಗಳನ್ನು ನಿರ್ಲಕ್ಷಿಸಿ ಸಮಾಜಕ್ಕೆ ಉಪಯೋಗವಾಗುವ ಮತ್ತು ಅಗತ್ಯವಿರುವ ಸುದ್ದಿಗಳನ್ನು ಮಾತ್ರ ಬಿತ್ತರಿಸುವ ಕೆಲಸ ಆಗಬೇಕು. ಸಮಾಜದ ಏಳ್ಗೆಗೆ ಹಗಲಿರುಳು ಶ್ರಮಿಸುವ ಪತ್ರಕರ್ತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೆಲವರಿಗೆ ಸ್ವಂತ ಮನೆಗಳಿಲ್ಲ. ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ.

ಇವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು. ನಗರದಲ್ಲಿ ಪತ್ರಿಕಾ ಭವನ ನಿರ್ಮಾಣ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಕೂಡಲೆ ಭವನ ನಿರ್ಮಾಕ್ಕೆ ಮುಂದಾಗುವಂತೆ ತಿಳಿಸುವುದಾಗಿ ಹೇಳಿದರು.

Advertisement

ಸಂಸದ ಭಗವಂತ ಖೂಬಾ ಮಾತನಾಡಿ, ಆಡಳಿತ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವೆನಿಸಿರುವ ಪತ್ರಿಕಾ ರಂಗವು ಸಮಾಜದ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತ್ತದೆ. ಸಮಾಜದ ಸಮಸ್ಯೆಗಳು, ಸರ್ಕಾರದ ಲೋಪಗಳನ್ನು
ಸರಿಪಡಿಸಲು ನಿರಂತರವಾಗಿ ಶ್ರಮಿಸುತ್ತದೆ. ಸಮಾಜಕ್ಕಾಗಿ ದುಡಿಯುವ ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದರು. 

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ ಮಾತನಾಡಿ, ಸಂವಿಧಾನವು ಎಲ್ಲರಿಗೂ ಬದುಕುವ ಹಕ್ಕು ನೀಡಿದೆ. ಅದರಂತೆ ಪತ್ರಕರ್ತರು ನೆಮ್ಮದಿಯಿಂದ ವಾಸಿಸಲು ಅವರಿಗೆ ವಸತಿ ಸೌಲಭ್ಯ ನೀಡಬೇಕು. ಹಿಂದೆ ಹಿರಿಯ ಪತ್ರಕರ್ತರಿಗೆ ನಿವೇಶನಗಳನ್ನು ನೀಡಲಾಗುತ್ತಿತ್ತು. ಈ ಸೌಲಭ್ಯ ಕಲ್ಪಿಸಲು ಸಚಿವರು ಮುಂದಾಗಬೇಕು ಎಂದು
ಕೋರಿದರು.

ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಸಾಮಾಜಿಕ ಜಾಲ ತಾಣಗಳ ಸುದ್ದಿಗಳು ಕ್ಷಣಾರ್ಧದಲ್ಲಿ ಜನರಿಗೆ ತಲುಪುತ್ತಿವೆ. ಆದರೆ ಇಲ್ಲಿರುವ ಸುದ್ದಿಗಳೆಲ್ಲವೂ ಸತ್ಯವಿರುವುದಿಲ್ಲ. ಹಾಗಾಗಿ ಯುವಜನಾಂಗ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ ಮಾತನಾಡಿದರು.

ಕರ್ನಾಟಕ ರಾಜ್ಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ವಾಲಿ, ಶಾಸಕ ರಹೀಮ ಖಾನ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ವಿಧಾನ ಪರಿಷತ್‌ ಮಾಜಿ ಸಭಾಪತಿ ಡೇವಿಡ್‌ ಸೀಮನ್‌, ಬೆಂಗಳೂರಿನ ಚಿಂತಕಿ ಸಂಜ್ಯೋತಿ ವಿ.ಕೆ., ಶಶಿಕುಮಾರ ಪಾಟೀಲ, ಮಾಳಪ್ಪ ಅಡಸಾರೆ, ಪೂರ್ಣಿಮಾ ಜಾರ್ಜ್‌, ಸಿಪಿಐ ಮಲ್ಲಮ್ಮ ಚೌಬೆ, ಸುಜಾತಾ ಹೊಸಮನಿ, ಡಾ| ಲಲಿತಮ್ಮ, ಡಾ| ಸುಮಾ ಭಾಲ್ಕೆ, ಕೀರ್ತಿ, ಅನೀತಾ ಮುಲಗೆ, ವಿದ್ಯಾ ಪಾಟೀಲ, ಧನಲಕ್ಷ್ಮೀ ಪಾಟೀಲ, ಶಿವಕಾಂತಮ್ಮ ಮೈನಳ್ಳಿ, ಪವಿತ್ರಾ, ವೀಣಾ ಚಿಮಕೋಡ, ವಿಜಯಾ ರಂಜನಿ, ವಾಣಿ ಬೆಳ್ಳೂರ, ರಾಣಿ ಸತ್ಯಮೂರ್ತಿ, ಲಕ್ಷ್ಮೀ ಡಿಗಾರೆ, ಶಾಲಿನಿ ಫ್ಲಾರೆನ್ಸ್‌, ಆನಂದ ದೇವಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next