Advertisement
ಬೆಳಗ್ಗೆ 5 ರಿಂದ 6 ಗಂಟೆಯ ವೇಳೆ ಹೃದಯಾಘಾತ ಸಂಭವಿಸಿರುವ ಸಾಧ್ಯತೆಗಳಿದ್ದು, ಬೆಳಗ್ಗೆ ಆಪ್ತರೊಬ್ಬರು ಬಾಗಿಲು ತಟ್ಟಿದಾಗ ಬಾಗಿಲನ್ನು ತೆಗೆದಿಲ್ಲ ಎಂದು ವರದಿಯಾಗಿದೆ. ಕೂಡಲೆ ಬಾಗಿಲು ಒಡೆದು ಒಳ ಪ್ರವೇಶಿಸಿ ನೋಡಿದಾಗ ಹಾಸಿಗೆಯ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಮಹದೇವ್ ಪ್ರಸಾದ್ ಅವರು ಇಹಲೋಕ ತ್ಯಜಿಸಿದ್ದರು.
Related Articles
Advertisement
ಮುಖ್ಯಮಂತ್ರಿ ತೀವ್ರ ಕಂಬನಿ,ಸರಕಾರಿ ರಜೆ ಘೋಷಣೆ
ಸಚಿವ ಪ್ರಸಾದ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಗಳವಾರ ಸರಕಾರಿ ರಜೆ ಘೋಷಿಸಿದ್ದಾರೆ.ಅವರ ಗೌರವಾರ್ಥ 3 ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ನಡೆಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿಎಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಮಹದೇಹಪ್ಪ ಅವರ ನಿಧನ ಅನಿರೀಕ್ಷಿತ, ನನಗೆ ದಿಗ್ಭ್ರಮೆ ಉಂಟುಮಾಡಿದೆ. ಮಲಗಿರುವಾಗಲೇ ಬೆಳಗಿನ ಜಾವ ಹೃದಯಾಘಾತ ಆಗಿದೆ. ಅವರು ನನ್ನ ಆಪ್ತರಲ್ಲಿ ಒಬ್ಬರಾಗಿದ್ದರು. ಅವರ ಸಾವು ವ್ಯಯಕ್ತಿಕವಾಗಿ ನನಗೆ ದೊಡ್ಡ ನಷ್ಟ , ಪಕ್ಷಕ್ಕೂ ಕೂಡ ತುಂಬಲಾರದ ನಷ್ಟ. ಸಜ್ಜನ ರಾಜಕಾರಣಿ, ಮಿತಭಾಷಿಯಾಗಿದ್ದ ಅವರು ಕೋಪದಿಂದ ಮಾತನಾಡುವುದನ್ನು ನೋಡೆ ಇಲ್ಲ’ ಎಂದರು.
‘ಅವರು ಅಜಾತಶತ್ರು ಇದ್ದಹಾಗೆ, ಯಾವುದೇ ಜವಾಬ್ದಾರಿ ಕೊಟ್ಟರೂ ಅಚ್ಚಕಟ್ಟಾಗಿ ನಿರ್ವಹಿಸುತ್ತಿದ್ದರು. ಸಚಿವನಾಗಿ ಬಹಳ ಶಿಸ್ತಿನಿಂದ ಕೆಲಸ ಮಾಡಿದ್ದರು. ಯಾವುದೇ ಕಪ್ಪು ಚುಕ್ಕಿ ಇರಲಿಲ್ಲ. 5 ಬಾರಿ ಗುಂಡ್ಲುಪೇಟೆಯಿಂದ ಸತತವಾಗಿ ಆಯ್ಕೆಯಾಗಿದ್ದರು. ಇನ್ನೂ ಎಷ್ಟು ಬಾರಿ ನಿಂತರೂ ಗೆಲ್ಲುತ್ತಿದ್ದರು. ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರ ಗೆಲ್ಲಲು ಇವರ ಕೊಡುಗೆ ಅಪಾರವಾಗಿತ್ತು. ಅವರೊಬ್ಬ ಸುಸಂಸಕೃತ ವ್ಯಕ್ತಿಯಾಗಿದ್ದರು’.
‘ಸಾವು ಎಷ್ಟೊಂದು ಅನಿಶ್ಚಿತ ಎನ್ನುವುದಕ್ಕೆ ಇದೊಂದು ಉದಾಹರಣೆ, ದಕ್ಷ ಮಂತ್ರಿಯನ್ನು ಕಳೆದುಕೊಂಡಿದ್ದೇವೆ. ಸ್ನೇಹಿತ ಆಪ್ತನನ್ನು ಕಳೆದುಕೊಂಡಿದ್ದೇನೆ. ಸಾಯೋ ವಯಸ್ಸು ಅವರದ್ದಲ್ಲ’ ಎಂದು ತೀವ್ರ ಕಂಬನಿ ಮಿಡಿದರು.
5 ಬಾರಿ ಶಾಸಕ, 3 ಬಾರಿ ಸಚಿವ!
1958 ಅಗಸ್ಟ್ 5 ರಂದು ಜನಿಸಿದ್ದ ಅವರ ಪೂರ್ಣ ಹೆಸರು ಹಾಲಹಳ್ಳಿ ಶ್ರೀಕಾಂತ ಶೆಟ್ಟಿ ಮಹದೇವ ಪ್ರಸಾದ್. 5 ಬಾರಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಹಾಲಿ ಅವರು ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
ಈ ಹಿಂದೆ ಜನತಾದಳದಲ್ಲಿದ್ದ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದರು. ಈ ಹಿಂದೆ ಎಚ್.ಡಿ. ಕುಮಾರ ಸ್ವಾಮಿ ಅವರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ಧರ್ಮಸಿಂಗ್ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆಗಳನ್ನು ನಿರ್ವಹಿಸಿದ್ದರು.
1994 ರಲ್ಲಿ ಜನತಾದಳದಿಂದ, 1999 ರಲ್ಲಿ ಜೆಡಿಯುನಿಂದ, 2004ರಲ್ಲಿ ಜೆಡಿಎಸ್‌ನಿಂದ , 2008 ಮತ್ತು 2013ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು.
2004 ರಲ್ಲಿ ಬೈಪಾಸ್ ಸರ್ಜರಿ ಗೊಳಗಾಗಿದ್ದ ಮಹದೇವ ಪ್ರಸಾದ್ ಅವರಿಗೆ 2016 ರಲ್ಲಿ ಆ್ಯಂಜಿಯೋಪ್ಲಾಸ್ಟಿ ಸರ್ಜರಿ ನಡೆಸಲಾಗಿತ್ತು.