Advertisement

ರಾಜ್ಯದ ರಸ್ತೆಗಳ ಗುಂಡಿಗೆ ಕಾಯಕಲ್ಪ

06:00 AM Jun 22, 2018 | |

ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 20ರಿಂದ 25 ಸಾವಿರ ರೂ.ಹಣ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಬಿದ್ದ ಕಾರಣ ರಾಜ್ಯದ ಬಹುತೇಕ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. 

ಅವುಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಪ್ರತಿ ಕಿ.ಮೀ.ಗೆ 20ರಿಂದ 25 ಸಾವಿರ ರೂ.ಹಣ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸದ್ಯ ಜಲ್ಲಿ ಹಾಕಿ ರಸ್ತೆ ಸಮತಟ್ಟು ಮಾಡಿ, ಮಳಗಾಲ ಮುಗಿದ ಬಳಿಕ ಡಾಂಬರೀಕರಣ ಮಾಡಲಾಗುವುದು ಎಂದರು.

ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ,ಮಂಗಳೂರು, ಉಡುಪಿ, ಕೊಡಗು ಜಿಲ್ಲೆಗಳ ಪ್ರವಾಸ ಕೈಗೊಂಡು ಪರಿಸ್ಥಿತಿಯ ಅವಲೋ ಕನ ನಡೆಸಿದ್ದೇನೆ. ಬಿರುಕು ಬಿಟ್ಟ ಸೇತುವೆಗಳನ್ನು ಗುರುತಿಸಿ ಅಲ್ಲಿ ಪರ್ಯಾಯ ರಸ್ತೆಗೆ ವ್ಯವಸ್ಥೆ ಮಾಡಿಕೊಡಬೇಕು. ಮಳೆ ನೀರಿನಲ್ಲಿ ಮುಳುಗಿ ಹೋಗುವ ನಾಲೆ ಮತ್ತು ರಸ್ತೆಗಳ ಎರಡೂ ಬದಿಯಲ್ಲಿ ಅಧಿಕಾರಿಗಳು ಬೀಡು ಬಿಟ್ಟು, ಸಾರ್ವಜನಿಕರು ಸಂಚರಿಸ ದಂತೆ ತಡೆಯಬೇಕೆಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.

Advertisement

ಕೇಂದ್ರದಿಂದ 7 ಸಾವಿರ ಕೋಟಿ ಮಂಜೂರು: “ಕೇಂದ್ರ ರಸ್ತೆ ನಿಧಿ’ಯಡಿ (ಸಿಆರ್‌ಎಫ್) ರಾಜ್ಯಕ್ಕೆ ಮೂರು ಕಂತುಗಳಲ್ಲಿ 7 ಸಾವಿರ ಕೋಟಿ ರೂ.ಮಂಜೂರಾಗಿದೆ. ಇದರಲ್ಲಿ ಪ್ರತಿ ವರ್ಷ ಕೇಂದ್ರ ಸರ್ಕಾರ 500 ಕೋಟಿ ರೂ. ಮಾತ್ರ ಬಿಡುಗಡೆ ಮಾಡುತ್ತದೆ. ಈ ರೀತಿ ಪ್ರತಿ ವರ್ಷ 500 ಕೋಟಿಯಂತೆ 7 ಸಾವಿರ ಕೋಟಿ ರೂ.ಅನುದಾನದ ಪ್ರಸ್ತಾವಿತ ರಸ್ತೆ ನಿರ್ಮಾಣ,ದುರಸ್ತಿ, ನಿರ್ವಹಣೆ ಕಾಮಗಾರಿಗಳು ಪೂರ್ಣಗೊಳಿಸಬೇಕಾದರೆ 15 ವರ್ಷ ಅವಧಿ ಬೇಕಾಗುತ್ತದೆ. ಹೀಗಾದರೆ, ನಿಧಿಯಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಕೇಂದ್ರ ರಸ್ತೆ ನಿಧಿಯಡಿ ರಾಜ್ಯಕ್ಕೆ ವಿಶೇಷ ಅನುದಾನ ನೀಡುವಂತೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಅದೇ ರೀತಿ, ರಾಜ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಬೆಂಗಳೂರು- ಮೈಸೂರು ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ಕೊಟ್ಟು
ಪರಿಶೀಲನೆ ನಡೆಸುವುದಾಗಿ ಗಡ್ಕರಿ ಭರವಸೆ ನೀಡಿದ್ದಾರೆ ಎಂದು ರೇವಣ್ಣ ಹೇಳಿದರು.

ನಾನು-ಡಿಕೆಶಿ ಚೆನ್ನಾಗಿದ್ದೇವೆ: ರೇವಣ್ಣ
ಬೆಂಗಳೂರು: “ನಾನು ಮತ್ತು ಸಚಿವ ಡಿ.ಕೆ. ಶಿವಕುಮಾರ್‌ ಚೆನ್ನಾಗಿದ್ದೇವೆ. ಮಾಧ್ಯಮದವರು ಏನೇನೋ ಪ್ರಚಾರ ಮಾಡಿದ್ರೆ, ಅದಕ್ಕೆ ನಾನೇನು ಮಾಡಲಿ’ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು. 

“ಐಟಿ ದಾಳಿ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್‌ ಬೆಂಬಲಕ್ಕೆ ನೀವು ನಿಲ್ಲುತ್ತೀರಾ’ ಎಂಬ ಪ್ರಶ್ನೆಗೆ, ನಾನು ಮತ್ತು ಶಿವಕುಮಾರ್‌ ಚೆನ್ನಾಗಿದ್ದೇವೆ. ರಾಜಕೀಯದಲ್ಲಿ ಯಾರೂ ವೈಯಕ್ತಿಕ ದ್ವೇಷ ಇಟ್ಟುಕೊಳ್ಳಬಾರದು ಅನ್ನುವುದು ನನ್ನ ಅಭಿಪ್ರಾಯ.

ನ್ಯಾಯಾಲಯದಲ್ಲಿರುವ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ರೇವಣ್ಣ ಸಮ್ಮಿಶ್ರ ಸರ್ಕಾರದ ಸೂಪರ್‌ ಸಿಎಂ ಎಂದು ಕಾಂಗ್ರೆಸ್‌ನ ಹಿರಿಯರೇ ಹೇಳುತ್ತಾರಲ್ಲಾ ಎಂದು ಕೇಳಿದ್ದಕ್ಕೆ “ನಮೆªàನಿಲ್ಲ ಸ್ವಾಮಿ, ನಾನ್ಯಾಕೆ ಸೂಪರ್‌ ಸಿಎಂ ಆಗಲಿ. ಹಾಗೊಂದು ವೇಳೆ ನಾನು ಸೂಪರ್‌ ಸಿಎಂ ಎಂದು ಹಿರಿಯರು ಹೇಳಿದರೆ ಅದನ್ನು “ಆಶೀರ್ವಾದ’ ಎಂದು ತಿಳಿದುಕೊಳ್ಳುತ್ತೇನೆ’ ಎಂದು ನಗುತ್ತಲೇ ಹೇಳಿದರು.

ಈ ಬಾರಿಯ ಬಜೆಟ್‌ನಲ್ಲಿ ಸಹಕಾರಿ ಬ್ಯಾಂಕುಗಳಲ್ಲಿನ 11ರಿಂದ 13 ಸಾವಿರ ಕೋಟಿ ರೂ.ಸಾಲ ಮನ್ನಾ, ಹಿರಿಯ ನಾಗರಿಕರಿಗೆ ಪಿಂಚಣಿ,ಗರ್ಭಿಣಿಯರಿಗೆ ಹೆರಿಗೆ ಭತ್ಯೆ ಕೊಡಬೇಕು ಎಂದು ಹೇಳಿದ್ದೇನೆ. ರೈತರ ಸಾಲ ಮನ್ನಾ
ನಮ್ಮ ಆದ್ಯತೆ. ಜೂ.25ರಂದು ಮತ್ತೂಂದು ಸುತ್ತಿನ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.

– ಎಚ್‌.ಡಿ.ರೇವಣ್ಣ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next