Advertisement

ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ :ಸಚಿವ ಹಾಲಪ್ಪ ಆಚಾರ್‌

06:42 PM Oct 05, 2021 | Team Udayavani |

ಕೊಪ್ಪಳ: ವೈದ್ಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದ್ದು, ಅದನ್ನು ಕಾಪಾಡುವುದಲ್ಲದೇ ಜನರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಸಲಹೆ ನೀಡಿದರು.

Advertisement

ನಗರದ ಕಿಮ್ಸ್‌ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ನೀಡುತ್ತಾರೆಂಬ ದೂರುಗಳಿದ್ದು, ಅವುಗಳನ್ನು ಸರಿಪಡಿಸಿ ರೋಗಿಗಳಿಗೆ ಅಗತ್ಯ ಸೇವೆ ಒದಗಿಸಬೇಕು. ಅಲ್ಲದೇ ಚಿಕಿತ್ಸೆ ಲಭ್ಯವಿಲ್ಲ ಎಂದು ಬೇರೆಡೆ ಕಳುಹಿಸಬಾರದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ದಾರಿ ತಾವು ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಗಂಗಾವತಿ ಮತ್ತು ಯಲಬುರ್ಗಾ ತಾಲೂಕು ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿವೆ. ಆದರೆ, ಕೊಪ್ಪಳ ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್‌ ನಂತಹ ದೊಡ್ಡ ಸಂಸ್ಥೆಗಳು ಜಿಲ್ಲೆಯಲ್ಲಿದ್ದು, ಜನರಿಗೆ ಸರಿಯಾಗಿ ಚಿಕಿತ್ಸೆ ನೀಡದಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ತಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ವೈದ್ಯರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಮಾತ್ರ ಜನರಿಗೆ ಒಳ್ಳೆಯ ಸೇವೆ ನೀಡಬಹುದು. ಜನರ ಜೀವ ರಕ್ಷಣೆ ಮಾಡುವ ತಮಗೆ ಜನರು ದೇವರ ಸ್ಥಾನದಲ್ಲಿ ನೋಡುತ್ತಾರೆ. ದುಡ್ಡಿಗೆ ಮಹತ್ವ ಕೊಡದೇ ಮೊದಲು ಬಡಜನರ ಸೇವೆಗೆ ಆದ್ಯತೆ ನೀಡಿ, ವೃತ್ತಿ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರು ತಮ್ಮ ಕೆಲಸ ಜವಾಬ್ದಾರಿಯಿಂದ ನಿರ್ವಹಿಸದೇ ಸರ್ಕಾರಿ ಆಸ್ಪತ್ರೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುತ್ತಾರೆ. ಜಿಲ್ಲೆಯಲ್ಲಿ ಹಲವಾರು ಸರ್ಕಾರದ ದೊಡ್ಡ ಆಸ್ಪತ್ರೆಗಳಿದ್ದರೂ ಜನರಿಗೆ ಸರಿಯಾಗಿ ಚಿಕಿತ್ಸೆ ನೀಡದಿರುವುದು ವಿಷಾದದ ಸಂಗತಿ ಎಂದರು.

Advertisement

ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಮಾತನಾಡಿ, ಇನ್ಮುಂದೆ ಯಾವುದೇ ವೈದ್ಯರ ಕರ್ತವ್ಯಲೋಪದ ದೂರುಗಳು ಕಂಡು ಬಂದರೆ ಅಂಥವರ ವಿರುದ್ಧ ಐಪಿಸಿ ಸೆಕ್ಷನ್‌ 188 ರಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಾಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌, ಡಿಎಚ್‌ಒ ಡಾ|ಟಿ. ಲಿಂಗರಾಜ್‌, ಜಿಲ್ಲಾ ಆರ್‌ಸಿಎಚ್‌ ಅ ಧಿಕಾರಿ ಡಾ| ಜಂಬಯ್ಯ, ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿ ಡಾ| ರವೀಂದ್ರನಾಥ, ಶಸ್ತ್ರ ಚಿಕಿತ್ಸಕ ಪ್ರಶಾಂತ ಬಾಬು, ಕಿಮ್ಸ್‌ ನಿರ್ದೇಶಕ ಡಾ| ವೈಜನಾಥ ಇಟಗಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಮಹೇಶ ಎಂ.ಜಿ, ತಾಲೂಕು ಆರೋಗ್ಯಾಧಿಕಾರಿ ಡಾ| ರಾಮಾಂಜನೇಯ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next