Advertisement

ಆ್ಯಪ್‌ಗ್ಳಿಂದ ವೆಬ್‌ಸೈಟ್‌ಗಳಿಗೆ ಕಂಟಕ: ಸಚಿವ ಪ್ರಿಯಾಂಕ ಖರ್ಗೆ

11:22 AM Jul 07, 2017 | |

ಬೆಂಗಳೂರು: ವೆಬ್‌ಸೈಟ್‌ಗಳ ಸ್ಥಾನವನ್ನು ಈಗ ಮೊಬೈಲ್‌ ಆ್ಯಪ್‌ಗ್ಳು ಆಕ್ರಮಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ವೆಬ್‌ಸೈಟ್‌ ತನ್ನ ಅಸ್ಥಿತ್ವ ಕಳೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಮೊಬೈಲ್‌ ಆ್ಯಪ್‌ಗೆ ಭವಿಷ್ಯದಲ್ಲಿ ಅತಿ ಹೆಚ್ಚು ಬಂಡವಾಳ ಹರಿದುಬರಲಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು. ನಗರದ ಶೆರಟನ್‌ ಹೋಟೆಲ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಗ್ಲೋಬಲ್‌ ಮೊಬೈಲ್‌ ಆ್ಯಪ್‌ ಸಮಿಟ್‌ ಆಂಡ್‌ ಅವಾರ್ಡ್‌ (ಜಿಎಂಎಎಸ್‌ಎ)ಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. 

Advertisement

ವಿವಿಧ ಕಂಪನಿಗಳು 90ರ ದಶಕದಲ್ಲಿ ವ್ಯವಹಾರದ ದೃಷ್ಟಿಯಿಂದ ವೆಬ್‌ಸೈಟ್‌ಗಳ ಮೊರೆಹೋದವು. ಮುಂದಿನ 20 ವರ್ಷಗಳಲ್ಲಿ ವೆಬ್‌ಸೈಟ್‌ ತನ್ನ ಮೌಲ್ಯ ಕಳೆದುಕೊಳ್ಳಲಿದ್ದು, ಇದರ ಸ್ಥಾನವನ್ನು ಮೊಬೈಲ್‌ ಆ್ಯಪ್‌ಗ್ಳು ಆಕ್ರಮಿಸಿಕೊಳ್ಳಲಿವೆ. ಈಚೆಗೆ ಉದ್ಯಮಿಗಳು ಮೊಬೈಲ್‌ ಆ್ಯಪ್‌ಗ್ಳತ್ತ ವಾಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಸಾಕಷ್ಟು ಬಂಡವಾಳ ಹರಿದುಬರಲಿದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು. 

ಜಾಗತಿಕವಾಗಿ ಪ್ರಸ್ತುತ ಆ್ಯಪ್‌ ಬಳಕೆದಾರರ ಸಂಖ್ಯೆ 130 ಕೋಟಿ ಇದೆ. 2021ರವೇಳೆಗೆ ಅದು 630 ಕೋಟಿಗೆ ಏರಿಕೆಯಾಗಲಿದೆ. ಹೀಗಾಗಿ ಉದ್ಯಮಿಗಳು ಮೊಬೈಲ್‌ ಆ್ಯಪ್‌ ಅಭಿವೃದ್ಧಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದ ಸಚಿವರು, ಸಮೀಕ್ಷೆ ಪ್ರಕಾರ 2015ರಲ್ಲಿ ದೇಶಾದ್ಯಂತ ಮೂರೂವರೆ ಕೋಟಿ ಮಂದಿ ಮಪಬೈಲ್‌ ಆ್ಯಪ್‌ ಬಳಕೆದಾರರಿದ್ದು, 2016ರ ಹೊತ್ತಿಗೆ ಈ ಸಂಖ್ಯೆ ಆರು ಕೋಟಿಗೆ ಏರಿಕೆಯಾಗಿದೆ ಎಂದರು.

ಕರ್ನಾಟಕ ಒನ್‌ ಅಡಿ 4 ಸಾವಿರ ಸೇವೆ
ರಾಜ್ಯ ಸರ್ಕಾರ ಕೂಡ ಕರ್ನಾಟಕ ಒನ್‌ ಮೊಬೈಲ್‌ ಆ್ಯಪ್‌ ಹೊಂದಿದೆ. ಸುಮಾರು 4 ಸಾವಿರ ಸೇವೆಗಳು ಇದರಡಿ ದೊರೆಯುತ್ತಿವೆ. ಸಾರ್ವಜನಿಕರು ಆ್ಯಪ್‌ ಮೂಲಕವೇ ವಿದ್ಯುತ್‌ ಬಿಲ್‌, ನೀರಿನ ಬಿಲ್‌ ಪಾವತಿಸಬಹುದು. ಬಿಎಂಟಿಸಿ ಬಸ್ಸುಗಳ ಮಾಹಿತಿ ಪಡೆಯಬಹುದು. ಅಲ್ಲದೆ, ಕೆಎಸ್‌ಟಿಡಿಸಿ ಆ್ಯಪ್‌ ಮೂಲಕ ಪ್ರವಾಸಿಗರು ರಾಜ್ಯದ ಎಲ್ಲ ಪ್ರವಾಸಿ ತಾಣಗಳ ಮಾಹಿತಿಯನ್ನು ಬೆರಳ ತುದಿಯಲ್ಲೇ ಪಡೆಯಬಹುದಾಗಿದೆ ಎಂದು ತಿಳಿಸಿದರು. 

ಬೆಂಗಳೂರು ನಗರ ಒಂದರಲ್ಲೇ 7 ಸಾವಿರ ಸ್ಟಾರ್ಟ್‌ಅಪ್‌ಗ್ಳಿವೆ. ಈ ಪೈಕಿ 3 ಸಾವಿರ ಸ್ಟಾರ್ಟ್‌ಅಪ್‌ಗ್ಳು ರಾಜ್ಯ ಸರ್ಕಾರದ ಜತೆ ನೋಂದಣಿ ಮಾಡಿಕೊಂಡಿವೆ. ನ್ಯಾಸ್ಕಾಂ ಮೂಲಕ 700 ಕೈಗಾರಿಕಾ ಉತ್ತೇಜನ ಕೇಂದ್ರಗಳನ್ನು ತೆರೆಯುವ ಮೂಲಕ ನಾವು ಉದ್ಯಮಿಗಳ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು. 

Advertisement

ಜಿಎಂಎಎಸ್‌ಎ ಅಧ್ಯಕ್ಷ ಸಿ.ಆರ್‌. ವೆಂಕಟೇಶ್‌ ಮಾತನಾಡಿ, ಮೊಬೈಲ್‌ ಆ್ಯಪ್‌ ಕ್ಷೇತ್ರದ ಬೆಳವಣಿಗೆ ಕುರಿತು ಕಂಪನಿಗಳು ಒಂದೇ ವೇದಿಕೆಯಲ್ಲಿ ವ್ಯವಹರಿಸಲು ಈ ಸಮಿಟ್‌ ಹಮ್ಮಿಕೊಳ್ಳಲಾಗಿದೆ. ಆ್ಯಪ್‌ ಅಭಿವೃದ್ಧಿಯಿಂದ ಹಿಡಿದು ಮಾರಾಟದವರೆಗಿನ ಎಲ್ಲ ಮಾಹಿತಿ ಈ ಸಮಾವೇಶದಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next