ಭೇರ್ಯ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯದ ಪಠ್ಯಕ್ರಮಗಳಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಕೆ.ಆರ್.ನಗರ ತಾಲೂಕಿನ ಶ್ರೀ ಜಪ್ಯೇಶ್ವರ (ಜಪದಕಟ) ಕ್ಷೇತ್ರದಲ್ಲಿ ಕೃಷ್ಣರಾಜನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದಿಂದ ನಡೆದ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಭಗವದ್ಗೀತೆ ಸೇರಿದಂತೆ ನಮ್ಮ ಸಂಸ್ಕೃತಿ, ಪರಂಪರೆ ಬಿಂಬಿಸುವ ಅಂಶಗಳು ಸೇರಿದಂತೆ ಮುಖ್ಯಗುರಿ ಯಾದ ಮೌಲ್ಯಧಾರಿತ ಶಿಕ್ಷಣ ಜಾರಿಗೆ ಅಳವಡಿಕೆ ಮಾಡಲಾಗುವುದು. ನಮ್ಮ ಸಂಸ್ಕೃತಿ, ನಮ್ಮತನವನ್ನು ಬಿಂಬಿಸುವ ಶಿಕ್ಷಣ ಪಡೆಯಬೇಕಿದೆ. ಶಿಕ್ಷಣದಿಂದಲೇ ಪರಿಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸ್ವಾಯತ್ತತೆ: ರಾಜ್ಯದ ಪ್ರಮುಖ ದೇವಾಲಯ ಗಳಿಗೂ ಸ್ವಾಯತ್ತತೆ ನೀಡುವ ಸಂಬಂಧ ಕಾನೂನು ಸುಧಾರಣೆ ಮಾಡಲು ಚಿಂತಿಸಲಾಗುವುದು. ಎಲ್ಲ ಕಾಲ ಘಟ್ಟದಲ್ಲೂ ಸ್ವಾಯñತೆ ¤ ನೀಡುವುದು ಸೂಕ್ತ. ಯಾವ್ಯಾವ ಉದ್ದೇಶಗಳಿಗೆ ಸ್ಥಾಪನೆಯಾಗಿವೆ ಎಂಬ ಆಧಾರದಲ್ಲಿ ದೇವಾಲಯಗಳು, ಮಠಗಳಲ್ಲದೆ ಎಲ್ಲ ಕ್ಷೇತ್ರಗಳಿಗೂ ಸ್ವಾಯತ್ತತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಅವರು ತಿಳಿಸಿದರು.
ಸೌಂದರ್ಯ ಲಹರಿ: ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರಾದ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ನನ್ನ ಮತ ಕ್ಷೇತ್ರ ಮಲ್ಲೇಶ್ವರ ಅರಮನೆ ಮೈದಾನದಲ್ಲಿ ಈ ಹಿಂದೆ ಸೌಂದರ್ಯ ಲಹರಿ ಕಾರ್ಯಕ್ರಮ ಆಯೋಜಿಸಿದ್ದರು. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಸಂತಸಪಟ್ಟಿದ್ದರು. ಸೌಂದರ್ಯ ಲಹರಿ ಕಾರ್ಯಕ್ರಮದಲ್ಲಿ ಶಂಕರ ಭಾರತಿ ಸ್ವಾಮೀಜಿ ಅವರು ಆ ಕಾರ್ಯಕ್ರಮದ ಮೂಲಕ ಮನಸ್ಸಿನ ಸೌಂದರ್ಯ ಹೆಚ್ಚಿಸುವ ಮಹತ್ವದ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ಶಂಕರಾಚಾರ್ಯರ ಸಂದೇಶಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ನಮ್ಮ ಜನರಲ್ಲಿ ಜ್ಞಾನ, ತಿಳಿವಳಿಕೆ, ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನದಲ್ಲಿ ಶ್ರೀಮಠದಿಂದ ನಡೆಯುವ ಇಂಥ ಸಮಾಜಮುಖೀ ಕಾರ್ಯಕ್ರಮಗಳಿಗೆ ಸರ್ಕಾರ ಹಾಗೂ ವೈಯಕ್ತಿಕವಾಗಿ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಡತೊರೆ ಯೋಗಾನಂದೇಶ್ವರ ಮಠದ ಪೀಠಾಧೀಶರಾದ ಶಂಕರ ಭಾರತಿ ಸ್ವಾಮಿ, ವಿವಿಧ ಮಠಾಧೀಶರು ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎ.ಎಸ್. ಚೆನ್ನಬಸಪ್ಪ, ತಹಶೀಲ್ದಾರ್ ಮಂಜುಳಾ, ಇಒ ರಮೇಶ್, ವೃತ್ತ ನಿರೀಕ್ಷಕ ಲವ, ಪಿಎಸ್‌ಐ ಆರತಿ, ಉಪತಹಶೀಲ್ದಾರ್ ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.