ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಶಾಂತವೇರಿ ಗೋಪಾಲಗೌಡ ಹೊರತುಪಡಿಸಿ ಉಳಿದೆಲ್ಲಾ ಸಮಾಜವಾದಿಗಳು ಮಜಾವಾದಿಗಳಾಗಿದ್ದಾರೆಂದು ಸಚಿವ ಸಿ.ಟಿ.ರವಿ ಟೀಕಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕಿದ್ದ ಗ್ರಹಣ ಬಿಟ್ಟಿದೆ. 14 ತಿಂಗಳ ರಾಹು ಕೇತು ತೊಲಗಿದೆ. ಉಪ ಚುನಾವಣೆ ಮೂಲಕ ರಾಜ್ಯದಲ್ಲಿ ಶುಕ್ರದೆಸೆ ಜೊತೆಗೆ ಗುರುಬಲ ಕೂಡಿಬಂದಿದೆ ಎಂದರು.
ಚುನಾವಣೆ ಯುದ್ಧವಿದ್ಧಂತೆ. ಕಾಂಗ್ರೆಸ್ ನಿಂದ ನೈತಿಕ ಪಾಠ ಕಲಿಯಬೇಕಿಲ್ಲ, ಕೃಷ್ಣಭೈರೇಗೌಡ, ಜಮೀರ್ ಅಹಮದ್, ಚೆಲುವರಾಯಸ್ವಾಮಿ ಎಲ್ಲಿದ್ದರು, ಕಾಂಗ್ರೆಸ್ ಮಾಡೋದು ನೈತಿಕತೆನಾ. ಮಟ್ಕಾ, ಜೂಜು ರೇಸ್ ಆಡುತ್ತಿದ್ದವರನ್ನ ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ದಾರೆ ಎಂದು ಕುಟುಕಿದರು.
ಇದು ಯಾವ ನೈತಿಕತೆ. ಚಿಕ್ಕಬಳ್ಳಾಪುರ ಜನರಿಗೆ ಅಭಿವೃದ್ಧಿ ಬೇಕಾ? ಇಲ್ಲವೇ ಗೂಂಡಾಗಿರಿ ಬೇಕಾ ಜನರಿಗೆ ಸಿಟಿ ರವಿ ಪ್ರಶ್ನಿಸಿದರು.
ಸಮಾಜವಾದಿಗಳಿಗೆಲ್ಲ ಬ್ರಾಂಡೆಡ್ ಬೇಕು. ಅವರು ಕುಡಿಯೋದಕ್ಕೆ ಸ್ಕಾಚ್ ಬೇಕು. ಅವರು ಹಾಕುವ ಸೆಂಟ್ ಸಹ ವಿದೇಶಗಳಿಂದ ತರಿಸುತ್ತಾರೆ. ಅವರಿಗೆ ಹಸು ಸಗಣಿ ವಾಸನೆ ಅಂದರೆ ಅಗಲ್ಲ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಗೆಲ್ಲುವ ರಾಜಕಾರಣ ಮಾಡಲಿ:
ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಲಾಗುವುದೆಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ ಅವರು, ಕುಮಾರಸ್ಚಾಮಿ ಗೆಲ್ಲುವ ರಾಜಕಾರಣ ಮಾಡಲಿ. ಸೋಲಿನ ರಾಜಕಾರಣ ಬೇಡ ಎಂದರು. ದೇವೇಗೌಡರು ತಮ್ಮ ಮಗನಿಗೆ ಸರಿಯಾಗಿ ರಾಜಕಾರಣ ಮಾಡುವುದನ್ನು ಕಲಿಸಲಿ ಎಂದರು.