ಬೆಂಗಳೂರು: ರಾಜ್ಯದಲ್ಲಿ 2020ರ ಜುಲೈ ಮತ್ತು ಸೆಪ್ಟಂಬರ್‌ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕಳೆದ ವರ್ಷ ನಡೆದ ಎಸೆಸೆ ಲ್ಸಿ ಪರೀಕ್ಷೆಯಲ್ಲಿ ಅಸಮರ್ಪಕ ಮೌಲ್ಯಮಾಪನ ಮಾಡಿದ 4,317 ಶಿಕ್ಷಕರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದರು.
ಒಟ್ಟು 10.25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 19 ಸಾವಿರ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 6ಕ್ಕಿಂತ ಕಡಿಮೆ ಅಂಕಗಳ ವ್ಯತ್ಯಾಸವಿದ್ದ 15,591 ಪತ್ರಿಕೆಗಳಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅಂಕಗಳನ್ನು ಸರಿಪಡಿಸಲಾಗಿದೆ. 6ರಿಂದ 10 ಅಂಕ ವ್ಯತ್ಯಾಸ ಮಾಡಿದ 3,056 ಉತ್ತರ ಪತ್ರಿಕೆಗಳಿವೆ. 11ರಿಂದ 15, 16 ರಿಂದ 20 ಮತ್ತು ಅದಕ್ಕೂ ಹೆಚ್ಚಿನ ಅಂಕಗಳಲ್ಲಿ ವ್ಯತ್ಯಾಸವಾಗಿರುವ 1,260 ಪತ್ರಿಕೆಗಳಿವೆ.
ತಪ್ಪಿತಸ್ಥ ಶಿಕ್ಷಕರಿಂದ 51.26 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಅದರಲ್ಲಿ 10.56 ಲಕ್ಷ ವಸೂಲಿ ಮಾಡಲಾಗಿದೆ. ಅಸಮರ್ಪಕ ಮೌಲ್ಯಮಾಪನ ಮಾಡಿದ ಶಿಕ್ಷಕರಿಗೆ ಮುಂದಿನ ಎರಡು ಪರೀಕ್ಷೆಗಳ ಮೌಲ್ಯಮಾಪನಕ್ಕೆ ಅವಕಾಶ ನೀಡದಂತೆ ಅಮಾನತು ಮಾಡಲಾಗಿದೆ. 20ರಿಂದ 25ಕ್ಕಿಂತಲೂ ಹೆಚ್ಚು ಅಂಕಗಳನ್ನು ವ್ಯತ್ಯಾಸ ಮಾಡಿದ ಶಿಕ್ಷಕರ ವಿರುದ್ಧ ಇದಕ್ಕಿಂತಲೂ ಕಠಿನ ಕ್ರಮ ಕೈಗೊಳ್ಳುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.
ಕಪ್ಪು ಪಟ್ಟಿಗೆ ಸೇರಿಸಿ
ಅಸಮರ್ಪಕ ಮೌಲ್ಯಮಾಪನ ಮಾಡಿ 25ಕ್ಕೂ ಹೆಚ್ಚು ಅಂಕಗಳ ವ್ಯತ್ಯಾಸ ಮಾಡಿರುವ ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಿ, ಅಂತಹ ಶಿಕ್ಷಕರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. 1 ತಿಂಗಳ ವೇತನ ಕಡಿತ ಮಾಡಬೇಕು. ಮುಂದೆ ಮೌಲ್ಯಮಾಪನಕ್ಕೆ ಅವಕಾಶ ಕೊಡಬಾರದು ಎಂದು ರವಿಕುಮಾರ್ ಸರಕಾರಕ್ಕೆ ಸಲಹೆ ನೀಡಿದರು.