Advertisement

ವಿಧಾನಸಭೆ: ಹಲವು ಸಮುದಾಯಗಳ ಮೀಸಲಾತಿ ಬೇಡಿಕೆ ಕುರಿತಂತೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿ ಹಾಗೂ ಹಿಂದುಳಿದ ವರ್ಗ ಗಳ ಆಯೋ ಗದ ವರದಿ ಪಡೆದು ಸೂಕ್ತ ಕ್ರಮ ತೆಗೆದುಕೊ ಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.

Advertisement

ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು, ಸಮುದಾಯಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡದಂತೆ ಮೀಸಲಾತಿ ವಿಚಾರದಲ್ಲಿ ಮುಂದುವರಿಯಬೇಕಿದೆ. ಹೀಗಾಗಿ ಸಂವಿಧಾನ ತಜ್ಞರ ಜತೆಗೂ ಚರ್ಚಿಸಲಿ ದ್ದೇವೆ ಎಂದರು.

ಯತ್ನಾಳ್‌ ಪ್ರತಿಭಟನೆ: ಮೀಸಲಾತಿ ಬೇಡಿಕೆ ವಿಚಾರ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌ ಸದನದ ಬಾವಿಗಿಳಿದ ಪ್ರಸಂಗ ನಡೆಯಿತು. ಪಂಚಮಸಾಲಿ ಸಮುದಾಯವು 27 ವರ್ಷಗಳಿಂದ ಅಂದರೆ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿ ಯಾಗಿದ್ದ ಕಾಲದಿಂದಲೂ ಮೀಸಲಾತಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸಮುದಾಯದ ಶೈಕ್ಷಣಿಕ- ಸಾಮಾಜಿಕ ಸ್ಥಿತಿಗತಿ ಅಧ್ಯಯನಕ್ಕೆ ಮಾಹಿತಿ ಕಲೆ ಹಾಕಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದ್ದರು.

ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಪುಟ ಉಪಸಮಿತಿ ರಚನೆಯಾಗಿತ್ತು. ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು. ಸುಪ್ರೀಂ ತೀರ್ಪು ಉಲ್ಲೇಖೀ ಸಿದ ಬೊಮ್ಮಾ ಯಿ: ಇದಕ್ಕೆ ಉತ್ತರಿಸಿದ ಸಚಿವ ಬೊಮ್ಮಾಯಿ, ರಾಜ್ಯಗಳಲ್ಲಿ ಮೀಸ ಲಾತಿ ಪ್ರಮಾಣ ಶೇ. 50 ಮೀರಬಾರದು ಎಂಬುದಾಗಿ ಸುಪ್ರೀಂಕೋರ್ಟ್‌ ಆದೇಶಿಸಿದೆ. ಮೀಸಲಾತಿ ಶೇ. 50ರಷ್ಟು ಮೀರಬೇಕಾದರೆ ನಿರ್ದಿಷ್ಟ ಮಾನದಂಡಗಳನ್ನು ಪಾಲಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಅತಿ ಎಚ್ಚರಿಕೆಯಿಂದ ಮುಂದುವರಿಯಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಒಟ್ಟು ಶೇ. 32, ಪರಿಶಿಷ್ಟ ಜಾತಿಗೆ ಶೇ. 15 ಹಾಗೂ ಪರಿಶಿಷ್ಟ ಪಂಗಡಕ್ಕೆ  ಶೇ. 3ರಷ್ಟು ಮೀಸಲಾತಿಯಿದ್ದು, ಶೇ. 50ರಷ್ಟಕ್ಕೆ ತಲುಪಿದೆ. ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ. 7.5ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆಯಿದೆ. ಪರಿಶಿಷ್ಟ ಜಾತಿಯವರು ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೇಳುತ್ತಿದ್ದಾರೆ. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಯಿದೆ. ಪ್ರವರ್ಗ- 3ಬಿನಲ್ಲಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ- 2ಎಗೆ ಸೇರಿಸಬೇಕೆಂಬ ಒತ್ತಾಯವಿದೆ. ಮೀಸಲಾತಿ ಪ್ರವರ್ಗ, ಮಿತಿ ಹೆಚ್ಚಳಕ್ಕೆ ಬೇಡಿಕೆಯಿದ್ದು, ಸರ್ಕಾರ ಜವಾಬ್ದಾರಿ ಯಿಂದ ಮುಂದುವರಿಯಬೇಕಾಗುತ್ತದೆ ಎಂದು ಹೇಳಿದರು.

Advertisement

2009ರಲ್ಲಿ ಪಂಚಮಸಾಲಿಸಮುದಾಯವನ್ನು “ಪ್ರವರ್ಗ- 3ಬಿ’ಗೆ ಸೇರ್ಪಡೆ ಮಾಡಲಾಯಿತು. ಬೇರೆ ಬೇರೆ ಕಾರಣಕ್ಕೆ ಹಾವನೂರು ಆಯೋಗದಲ್ಲಿ ಪಂಚಮಸಾಲಿ ಮುಂದುವರಿದ ಜಾತಿ ಎಂದು ದಾಖಲಾಗಿದೆ. ಕಾಂತರಾಜ್‌ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗವೂ ಪಂಚಮಸಾಲಿ ಸಮುದಾಯ “ಪ್ರವರ್ಗ- 3ಬಿ’ನಲ್ಲೇ ಇರಬೇಕೆಂದು ತಿಳಿಸಿದೆ. ಬಲಿಜ ಸಮುದಾಯ ಹಿಂದುಳಿದ ವರ್ಗಗಳ ಪ್ರವರ್ಗ 3ಬಿನಲ್ಲಿತ್ತು. ಆ ಹಿನ್ನೆಲೆಯಲ್ಲಿ ಕಾರ್ಯಕಾರಿ ಆದೇಶದ ಮೂಲಕ ಪ್ರವರ್ಗ- 3ಎಗೆ ಸೇರಿಸಲಾಗಿದೆ. ಆದರೆ ಕಾರ್ಯಕಾರಿ ಆದೇಶದ ಮೂಲಕ ಪ್ರವರ್ಗ- 2ಎಗೆ ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ನಡುವೆ ಸಿದ್ದರಾಮಯ್ಯ, ಆರ್ಥಿಕವಾಗಿ ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ನೀಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಬೇಕಾಗುತ್ತದೆ. ಹಾಗಾಗಿ ಮೀಸಲಾತಿ ಬದಲಾವಣೆ, ಹೆಚ್ಚಳ ಕುರಿತಂತೆ ಸರ್ಕಾರ ಸಂವಿಧಾನ ತಜ್ಞರದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಸರ್ಕಾರದ ವಿರುದ್ಧ  ತರಾಟೆ

ವಿಧಾನಸಭೆ: ಪಂಚಮಸಾಲಿ ಮೀಸಲಾತಿ ವಿಚಾರದ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದಾಗಿ ಹೇಳಿದ್ದ ಮುಖ್ಯ ಮಂತ್ರಿಗಳು ನಾಪತ್ತೆಯಾಗಿದ್ದಾರೆ. ಸಮಾಜ ಕಲ್ಯಾಣ ಸಚಿ ವರೂ ನಾಪತ್ತೆಯಾಗಿದ್ದಾರೆ. ಸರ್ಕಾರದಿಂದ ವ್ಯವಸ್ಥಿತವಾಗಿ ನಮ್ಮ ಸಮಾಜವನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಬಿಜೆಪಿಯ  ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಬುಧವಾರ ಶೂನ್ಯವೇಳೆಯಲ್ಲಿ ಮೀಸಲಾತಿ ವಿಚಾರ ಪ್ರಸ್ತಾಪಿಸಿದ ಅವರು ಪಂಚಮಸಾಲಿ ಸೇರಿ ಇತರೆ ಸಮುದಾಯಗಳ ಮೀಸಲಾತಿ ವಿಚಾರದ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟ ಉತ್ತರ ನೀಡಬೇಕು. ಇಲ್ಲದಿದ್ದರೆ ಧರಣಿ ನಡೆಸುವ ಎಚ್ಚರಿಕೆಯನ್ನೂ  ನೀಡಿದರು. ಜತೆಗೆ ಸ್ವಪಕ್ಷೀಯ ಸಚಿವರು, ಶಾಸಕರ ಬಗ್ಗೆ ಮಾರ್ಮಿಕ ಮಾತುಗಳನ್ನಾಡಿದ್ದರಿಂದ ಸರ್ಕಾರ ಮುಜುಗರಕ್ಕೊಳಗಾಗುವಂತಾಯಿತು.

ಶೆಟ್ಟರ್‌ಗೆ ಅಭಿನಂದನೆ: ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಕಳಕಳಿಯಿಂದ ತಮ್ಮ ಸಮಾಜವನ್ನು ಮೀಸಲಾತಿ ವ್ಯಾಪ್ತಿಗೆ ಸೇರಿಸಿ ಕೊಂಡಿದ್ದಾರೆ. ಅಷ್ಟೇ ಪ್ರೀತಿ, ಕಾಳಜಿಯಿಂದ ನಮ್ಮ ಸಮುದಾಯಕ್ಕೂ ಮೀಸಲಾತಿ ಕಲ್ಪಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಬಲವಾಗಿ ವಾದ ಮಂಡಿಸಬೇಕೆಂದು ಹೇಳಿದರು.

ಮಡಿವಾಳ, ಸವಿತಾ ಸಮಾಜ ಸೇರಿದಂತೆ ಎಲ್ಲ ಹಿಂದುಳಿದ ಸಮುದಾಯಗಳ ಮೀಸಲಾತಿ ಬಗ್ಗೆ ಪುನರ್‌ಪರಿಶೀಲಿಸಬೇಕು. ಸಚಿವರ ಉತ್ತರ ಕೇಳಲು ನಾವು ತಯಾರಿಲ್ಲ. ಮುಖ್ಯಮಂತ್ರಿಗಳ ಮನಸ್ಸಿನಲ್ಲೇನಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರೆ ಹೋರಾಟ ನಿಲ್ಲುತ್ತದೆ. ಇಲ್ಲದಿದ್ದರೆ ನಾನು ಸದನದಲ್ಲಿ ಹೋರಾಟ ನಡೆಸಿದರೆ, ಹೋರಾಟಗಾರರು ಹೊರಗೆ ಆಮರಣಾಂತ ಉಪವಾಸ ನಡೆಸುವ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಗುಡುಗಿದರು.

ಸಚಿವ ಬಸವರಾಜ ಬೊಮ್ಮಾಯಿ ಉತ್ತರದಿಂದ ಸಮಾಧಾನಗೊಳ್ಳದ ಯತ್ನಾಳ್‌, ಮೀಸಲಾತಿ ಕಲ್ಪಿಸಲು ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು ಇಲ್ಲವೇ ಒಂದು ವರ್ಷ, ಒಂದು ಶತಮಾನ, ಸಹಸ್ರ ವರ್ಷವಾದರೂ ಬೇಕು ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಲಿ. ಇಲ್ಲವೇ ಮೀಸಲಾತಿ ನೀಡುವ ಮನಸ್ಸಿಲ್ಲ ಎಂಬುದನ್ನಾದರೂ ತಿಳಿಸಲಿ. ಸ್ಪಷ್ಟ ಉತ್ತರ ನೀಡದಿದ್ದರೆ ಸೋಮವಾರದಿಂದ ನಾನು ಧರಣಿ ಕೂರುವವನೇ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next