ಕೊರಟಗೆರೆ: ಲೋಕಾಯುಕ್ತ ಅಧಿಕಾರ ಮೊಟಕು ಗೊಳಿಸಿದ್ದು ಸಿದ್ದರಾಮಯ್ಯ.. ತಮ್ಮ ರಕ್ಷಣೆಗಾಗಿ ಎಸಿಬಿ ಇಲಾಖೆಯನ್ನೇ ಪ್ರಾರಂಭ ಮಾಡಿದ್ರು.. ದುಡ್ಡುಕೋಟ್ರೇ ಮಾತ್ರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇವೆ ನೀಡ್ತಾರೇ.. ಇಲ್ಲಂದ್ರೇ ಕಾರ್ಯಕರ್ತರ ಒಂದೇ ಒಂದು ಅರ್ಜಿ ಕೂಡ ಕೆಲಸ ಮಾಡೋದಿಲ್ಲ.. ಭ್ರಷ್ಟಚಾರ-ಗೂಂಡಾಗಿರಿ ಅಂದ್ರೆನೇ ಕಾಂಗ್ರೆಸ್ ಪಕ್ಷ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಆರೋಪ ಮಾಡಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಕರಕಲಘಟ್ಟ ಮತ್ತು ಕೊರಟಗೆರೆ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿಯು ಪ್ರಜಾದ್ರೋಹದ ಧ್ವನಿಯಾಗಿದೆ. ಕಾಂಗ್ರೆಸ್ ಪಕ್ಷದ ಬಸ್ಸಿನಲ್ಲಿ ಎಷ್ಟು ಸೀಟು ಇದೀಯೊ ಅಷ್ಟೇ ಮಾತ್ರ ಅವರು ಸೀಮಿತ. ಭ್ರಷ್ಟಚಾರದ ಸಾಕ್ಷಿ ಆಧಾರ ಇದ್ರೇ ಸದನದಲ್ಲಿ ಧ್ವನಿ ಮಾಡದೇ ಈಗ ಬೀದಿನಾಟಕ ಮಾಡುತ್ತಿದ್ದಾರೆ. ಭಷ್ಟಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷದ ನಾಯಕರು ಜಾತಿ ವಿಂಗಡಣೆಗೆ ಮಾತ್ರ ಸೀಮಿತ. ಕಾಂಗ್ರೆಸ್ ಪಕ್ಷವನ್ನು ಈಗ ಕರ್ನಾಟಕದ ಜನತೆ ನಂಬೋದಿಲ್ಲ. ನಾವೆಲ್ಲರೂ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೋಣ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮನೆಯು ಇಟಲಿಯಲ್ಲಿದೆ. ಜೆಡಿಎಸ್ ಪಕ್ಷವು ಒಂದು ಕುಟುಂಬಕ್ಕೆ ಮಾತ್ರ ಸೇರಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯು ಸ್ಪಷ್ಟವಾಗಿ ಕಾಣುವುದು ಬಿಜೆಪಿ ಪಕ್ಷದಲ್ಲಿ ಮಾತ್ರ. ವಿಶ್ವನಾಯಕ ನರೇಂದ್ರಮೋದಿ ಭಾರತ ದೇಶದ ಆಸ್ತಿ. ಅಭಿವೃದ್ದಿ ಯುಗದಲ್ಲಿ ಭಾರತ ದೇಶವು ಈಗ ಮುನ್ನುಗ್ಗಿ ಅಭಿವೃದ್ದಿಯತ್ತ ಸಾಗುತ್ತಿದೆ. ಭಾರತ ದೇಶದ ಯಾವುದೇ ಕ್ಷೇತ್ರದಲ್ಲಿ ನೀವು ಕೇಳಿ ಶೇ. 65 ರಷ್ಟು ಜನತೆ ನರೇಂದ್ರಮೋದಿ ಹೆಸರನ್ನೇ ಹೇಳ್ತಾರೇ ಎಂದು ತಿಳಿಸಿದರು.
ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ 40 ವರ್ಷದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಅಧಿಕಾರ ನಡೆಸಿದೆ. ಪರಮೇಶ್ವರ್‌ರನ್ನ ಕಾಂಗ್ರೇಸ್ ಪಕ್ಷದವರೇ ಸೋಲಿಸ್ತಾರೇ. ಈಗ ನಮಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯೇ ಸವಾಲು. ಕೇಂದ್ರ ಮತ್ತು ರಾಜ್ಯದ ಬಿಜೆಪಿಯ ಡಬಲ್ ಇಂಜಿನ್ ಸರಕಾರದಿಂದ ಮಾತ್ರ ಅಭಿವೃದ್ದಿ ಸಾಧ್ಯ. ಕೊರಟಗೆರೆ ಕ್ಷೇತ್ರದಲ್ಲಿ 2023 ಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್, ಪ್ರಧಾನ ಕಾರ್ಯದರ್ಶಿ ಗುರುಧತ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‌ಕುಮಾರ್, ಮಾಜಿ ಶಾಸಕ ಗಂಗಹನುಮಯ್ಯ, ಬಿಜೆಪಿ ಮುಖಂಡ ಡಾ.ಲಕ್ಷ್ಮೀಕಾಂತ್, ಮಂಡಲ ಸಂಚಾಲಕ ಶಿವಕುಮಾರ ಸ್ವಾಮಿ, ಸಹ ಸಂಚಾಲಕ ಅರುಣ್‌ಕುಮಾರ್, ಮುಖಂಡರಾದ ವೆಂಕಟಾಚಲಯ್ಯ, ಡಾಡಿ ವೆಂಕಟೇಶ್, ರಘುಕುಮಾರ್ ಸೇರಿದಂತೆ ಇತರರು ಇದ್ದರು.
2013ರಲ್ಲಿ 5 ವರ್ಷ ಅಧಿಕಾರದಲ್ಲಿ ಇದ್ದ ಅಂದಿನ ಸಿಎಂ ಏನು ನಿದ್ರೆ ಮಾಡ್ತಿದ್ರಾ. ಕಂದಾಯ ಗ್ರಾಮ ಮತ್ತು ಮನೆಯ ಹಕ್ಕು ಪತ್ರ ನೀಡಲು 2018ರ ಸಮ್ಮಿಶ್ರ ಸರಕಾರದಲ್ಲಿ ಏನು ಬೆಕ್ಕುಅಡ್ಡ ಬಂದಿತ್ತಾ. ಲಂಬಾಣಿ ತಾಂಡಗಳಿಗೆ ನಮ್ಮ ಸರಕಾರ ರೂಪಿಸಿದ ವಿಶೇಷ ಯೋಜನೆಯು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಗೆ ಸೇರಿದೆ. ಕರಾವಳಿ ಮತ್ತು ಮಲೆನಾಡು ಜನರಿಗೆ ಬಿಜೆಪಿ ಸರಕಾರ ಅಭಿವೃದ್ದಿಯ ಕೊಡುಗೆ ನೀಡಿದೆ.
– ಡಾ.ಅಶ್ವತ್ಥನಾರಾಯಣ್. ಉನ್ನತ ಶಿಕ್ಷಣ ಸಚಿವ. ಕರ್ನಾಟಕ ಸರ್ಕಾರ.