ನೆಲಮಂಗಲ: ಅನುದಾನಿತ ಕನ್ನಡ ಶಾಲೆಯ ಬಾಗಿಲು ಮುಚ್ಚದಂತೆ ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿಗೆ ಭರವಸೆ ನೀಡಿದ್ದ ಸಚಿವ ಸುರೇಶ್‌ಕುಮಾರ್, ವಿಶೇಷ ಸಭೆ ನಡೆಸುವ ಮೂಲಕ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸೂಚನೆ ನೀಡಿದರು.
ತಾಲೂಕಿನ ಸೋಂಪುರದ ಸಿವಿಜಿ ಶಾಲೆಯ ವಿಷಯವಾಗಿ ಬೆಂಗಳೂರಿನ ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದವಿಶೇಷ ಸಭೆಯಲ್ಲಿ ಹಳೆಯ ವಿದ್ಯಾರ್ಥಿಗಳು, ಶಾಲೆ ಆಡಳಿತ ಮಂಡಳಿ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿ ಆಡಳಿತ ಮಂಡಳಿ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದರು.
ಸಿವಿಜಿ ಶಾಲೆ ಆಡಳಿತ ಮಂಡಳಿ ವಿಸ್ತರಣೆ ಮಾಡಿ 6ತಿಂಗಳಲ್ಲಿ ಶಾಲೆ ಸರ್ವತೋಮುಖ ಅಭಿವೃದ್ಧಿ ಜತೆ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡದಿದ್ದರೆ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಕರ್ನಾಟಕ ಪಬ್ಲಿಕ್‌ಶಾಲೆಯನ್ನಾಗಿ ಬದಲಿಸುವುದು ಖಚಿತ. ಆಡಳಿತ ಮಂಡಳಿಗೆ ಕೊನೆ ಅವಕಾಶ ನೀಡಲಾಗಿದೆ. ಶಾಲೆ ಕಾರ್ಯಚಟುವಟಿಕೆಗಳ ಬಗ್ಗೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ತಿಂಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು. ಆದರೆ, ಆಡಳಿತ ಮಂಡಳಿ ಯಾವುದೇ ಉತ್ತರ ನೀಡಿಲ್ಲ. ಸಚಿವರು, ಶಾಲೆ ಉಳಿವಿಗಾಗಿ ವಿಶೇಷ ಸಭೆ ನಡೆಸಿ ಕೈಬಲ ಪಡಿಸಿದ್ದಾರೆಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಮಂಜುನಾಥ್ ಸಂತೋಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಿಡಿಪಿಐ ಗಂಗಮಾರೇಗೌಡ, ಪ್ರೌಢ ಶಿಕ್ಷಣ ಸಹ ನಿರ್ದೇಶಕಿ ಗೀತಾ, ಬಿಇಒ ಕೆ.ಸಿ.ರಮೇಶ್, ಹಳೆಯವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ.ಪ್ರದೀಪ್ ಕುಮಾರ್, ಶಾಲಾ ಹಿತೈಷಿಗಳಾದ ಪ್ರಕಾಶ್ ಸಿಂಹ, ಅಶೋಕ್ ಜೀ, ನಟರಾಜ ಶಾಸ್ತ್ರಿ, ಚನ್ನೇಗೌಡ , ಸ್ಥಳೀಯರಾದ ಎಚ್.ಕೆ.ರವೀಶ, ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ಗೋವಿಂದರಾಜ್ ಗುಪ್ತ ಮತ್ತಿತರರಿದ್ದರು.