ಗಂಗಾವತಿ: ಕಾಂಗ್ರೆಸ್ ದುರಾಳಿತಕ್ಕೆ ಬೇಸತ್ತು ಬಿಜೆಪಿ ಸರಕಾರ ರಚನೆ ಮಾಡುವ ಉದ್ದೇಶದಿಂದ ಆನಂದ ಸಿಂಗ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಸರಕಾರ ರಚಿಸಲು ಪ್ರಮುಖ ಕಾರಣರಾಗಿದ್ದು ಅವರು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಿದ್ದು ರಾಜಕೀಯ ವಿಷಯಕ್ಕೆ ಅಲ್ಲ. ವೈಯಕ್ತಿಕ ಕಾರಣಗಳಿರಬಹುದು. ಆನಂದ ಸಿಂಗ್ ಬಿಜೆಪಿ ಬಿಡುವುದಿಲ್ಲ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಅವರು ಸೋಮವಾರ ತಾಲೂಕಿನ ಹನುಮನಹಳ್ಳಿಯಲ್ಲಿ ಉದಯವಾಣಿ ಜತೆ ಮಾತನಾಡಿದರು.
ಕಾಂಗ್ರೆಸ್ ನಿಂದ ಹಿರಿಯ ರಾಜಕಾರಣಿ ಸಜ್ಜನ ವ್ಯಕ್ಯಿ ಸಿ.ಎಂ.ಇಬ್ರಾಹಿಂ ಅವರನ್ನು ಹೊರಗೆ ಹಾಕಿದ್ದು ನನಗೆ ಬಹಳ ನೋವು ತಂದಿದೆ. ಸಿದ್ದಾಂತದ ಜತೆಗೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಅನುರಿಸಿದ್ದ ಇಬ್ರಾಹಿಂದ ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಂಡಿಲ್ಲ. ಅವರಿಗೆ ಬೇಸರವಾಗಿದೆ.
ರಾಜ್ಯದಲ್ಲಿ ಮುಸ್ಲಿಂ ಸಮಾಜದ ಹಿರಿಯ ಮುಖಂಡನಿಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವಮಾನ ಮಾಡಿದ್ದು ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಕಾಂಗ್ರೆಸ್ ಅನುಭವಿಸಬೇಕಾಗುತ್ತದೆ. ಇಬ್ರಾಹಿಂ ಅವರು ಬಿಜೆಪಿಗೆ ಬರುವುದಾದರೆ ತಾವೇ ಹೈಕಮಾಂಡ ಜತೆ ಮಾತನಾಡಿ ಸ್ವಾಗತ ನೀಡುತ್ತೇವೆ ಎಂದರು.
ವಾಲ್ಮೀಕಿ ಸಮಾಜಕ್ಕೆ ಶೀಘ್ರವೇ7.5 ಮೀಸಲಾತಿ: ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯದಲ್ಲೂ ವಾಲ್ಮೀಕಿ ಸಮಾಜಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡುವ ವಿಷಯದಲ್ಲಿ ಬಿಜೆಪಿ ಸರಕಾರ ಬದ್ಧವಾಗಿದೆ. ಈ ಬಗ್ಗೆ ನ್ಯಾಯ ಕೇಳಿದ ಮೊದಲ ವ್ಯಕ್ತಿ ಬಿ.ಶ್ರೀರಾಮುಲು ಆಗಿದ್ದು ಈಗಾಗಲೇ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆದಿದ್ದು ವಾಲ್ಮೀಕಿ ಗುರುಗಳ ಮತ್ತು ಸಮಾಜದವರಿಗೆ ಮನವರಿಕೆ ಮಾಡಲಾಗಿದೆ. ಶೀಘ್ರವೇ ಮುಖ್ಯಮಂತ್ರಿಗಳು ಹೆಚ್ಚುವರಿ ಮೀಸಲಾತಿ ಘೋಷಣೆಯಾಗಲಿದೆ.
ಕಲಂ371(ಜೆ) 2020 ರ ಸುತ್ತೋಲೆ ಶೀಘ್ರ ಬದಲು: ನೇಮಕಾತಿ ಸಂದರ್ಭದಲ್ಲಿ ಕಲಂ 371(ಜೆ) ಅನುಷ್ಠಾನ ಕುರಿತು 2020ರ ಸುತ್ತೋಲೆಯ ಹಿನ್ನೆಲೆಯಲ್ಲಿ ಮೇರಿಟ್ ಇದ್ದರೂ ಅದನ್ನು ಕಲ್ಯಾಣ ಕರ್ನಾಟಕಕ್ಕೆ ಸೀಮಿತಗೊಳಿಸುತ್ತಿರುವುದನ್ನು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳು ವಿರೋಧಿಸುತ್ತಿದ್ದು ಮೇರೀಟ್ ಇಡೀ ರಾಜ್ಯಕ್ಕೆ ಅನ್ವಯಿಸಿ ಕಲಂ 371(ಜೆ) ಮೀಸಲಾತಿ ಪಡೆಯುವವರಿಗೆ ಅದನ್ನು ಪ್ರತೇಕ ನೀಡುವಂತೆ ಮನವಿ ಬಂದಿದ್ದು ಫೆ.12 ರಂದು ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಕುರಿತು 2020 ಸುತ್ತೋಲೆ ಪುನರ್ ಪರಿಶೀಲಿಸಲಾಗುತ್ತದೆ. ನೇಮಕಾತಿ ಸಂದರ್ಭದಲ್ಲಿ ಸಾಮಾನ್ಯ ವರ್ಗದಲ್ಲಿ ನೇಮಕಾತಿ ಆಗುವವರಿಗೆ ಕಲಂ371(ಜೆ) ಅನ್ವಯಿಸಬಾರದು.
ಮೀಸಲಾತಿಯಲ್ಲಿರುವವರನ್ನು ಪ್ರತೇಕವಾಗಿ ಪರಿಗಣಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಪಿಎಸ್‌ಐ ನೇಮಕಾತಿ ಬಗ್ಗೆ ಶೀಘ್ರ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುವುದಾಗಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.