ಶಿರಹಟ್ಟಿ : ತಾಲೂಕಿನಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಹೇರಳವಾಗಿ ಕಲ್ಲಿನ ಗುಡ್ಡಗಳಿದ್ದು, ಇವುಗಳಲ್ಲಿ ಬಹಳ ದಿನಗಳಿಂದಲೂ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಅಧಿಕಾರಿಗಳು ಇವುಗಳ ಬಗ್ಗೆ ಗಮನಹರಿಸದೇ ಜಾಣ ಕರುಡುತನ ನಡೆ ಅನುಸರಿಸುತ್ತಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗುತ್ತಿದೆ.
ತಾಲೂಕಿನ ಚಿಕ್ಕಸವಣೂರ ಹದ್ದಿನಲ್ಲಿ ಅರಣ್ಯ ಇಲಾಖೆಯ ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಇಲ್ಲಿ ರಾಜಾರೋಷವಾಗಿ ಅಪಾರ ಪ್ರಮಾಣದಲ್ಲಿ ಗುಡ್ಡದಲ್ಲಿನ ಕಲ್ಲುಗಳನ್ನು ಹೊರತೆಗೆಯಲಾಗುತ್ತಿದೆ. ಇದಕ್ಕಾಗಿ ಬೃಹತ್ ಗಾತ್ರದ ಗುಂಡಿ ತೆಗೆದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರ ಹೊಲಗಳಿಗೆ ಧೂಳು ಮತ್ತು ಸಿಡಿ ಮದ್ದಿನಿಂದ ಕಲ್ಲುಗಳು ಎಲ್ಲೆಂದರಲ್ಲಿ ಹಾರಿ ಬಂದು ಬೀಳುತ್ತಿವೆ.
ಕಲ್ಲುಗಣಿಗಾರಿಕೆ ನಡೆಸುವವರು ಸರಕಾರದ ನಿಯಮಾವಳಿ ಗಾಳಿಗೆ ತೂರಿದ್ದಾರೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ :ಒಕ್ಕಲಿಗರ ಸಂಘದಿಂದ ಕಾಡಾ ಅಧ್ಯಕ್ಷರಿಗೆ ಸನ್ಮಾನ
ನೋಟಿಸ್‌ಗಿಲ್ಲ ಕಿಮ್ಮತ್ತು: ತಾಲೂಕಿನ ಕೊಂಚಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿನ 15 ಕ್ರಶರ್‌ಗಳಿಗೆ ಗ್ರಾಪಂಗೆ ತುಂಬಬೇಕಾದಂತಹ ತೆರಿಗೆ ತುಂಬುವುದಕ್ಕಾಗಿ ಈಗಾಗಲೇ ಮೂರು ಬಾರಿ ಅಂತಿಮವಾಗಿ ನೋಟಿಸ್ ನೀಡಿದ್ದರೂ ಇಲ್ಲಿಯವರೆಗೂ ಯಾವ ತೆರಿಗೆ ಹಣ ಸರಕಾರಕ್ಕೆ ಜಮಾ ಆಗಿಲ್ಲ. ಇದೀಗ ಪಂಚಾಯತ್ ರಾಜ್ ಅಧಿಕಾರಿಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಭಾವಿ ವ್ಯಕ್ತಿಗಳು ಅಧಿಕಾರಿಗಳನ್ನು ತಮ್ಮ ಕೈಗೊಂಬೆಗಳನ್ನಾಗಿಸಿಕೊಂಡು ಅರಣ್ಯ ಪ್ರದೇಶಗಳನ್ನು ಖಾಲಿ ಮಾಡುತ್ತಿದ್ದಾರೆ.