ರಾಜ್ಯದಲ್ಲಿ ಪರವಾನಿಗೆ ಇಲ್ಲದಿದ್ದರೂ ಪರಿಸ್ಥಿತಿಯ ಅನಿವಾರ್ಯತೆಗಾಗಿ ತತ್‌ಕ್ಷಣವೇ ಗಣಿಗಾರಿಕೆ ನಡೆಸಲು ರಾಜ್ಯ ಸರಕಾರ ಗಣಿ ಉದ್ಯಮಗಳಿಗೆ ಷರತ್ತು ಬದ್ಧ ಅನುಮತಿ ನೀಡಿದೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಕಬ್ಬಿಣದ ಅದಿರು, ಜಲ್ಲಿಕಲ್ಲು, ಮರಳು ಸೇರಿದಂತೆ ಕಚ್ಚಾವಸ್ತುಗಳನ್ನು ಪಡೆಯಲು ಗಣಿಗಾರಿಕೆ ನಡೆಸುವುದು ಅನಿವಾರ್ಯವಾಗಿದೆ.
ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ನಡೆದ ಕಲ್ಲುಗಣಿಗಾರಿಕೆ ನ್ಪೋಟದ ಸಂದರ್ಭದಲ್ಲಿ ಕಾರ್ಮಿಕರು ಜೀವ ಕಳೆದುಕೊಂಡ ಹಿನ್ನೆಲೆಯಲ್ಲಿ ಎಲ್ಲ ಮಾದರಿಯ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಮನೆ ನಿರ್ಮಾಣ, ರಸ್ತೆ ಸೇರಿದಂತೆ ಸರಕಾರದ ಯೋಜನೆಗಳ ಅನುಷ್ಠಾನ ಹಾಗೂ ಮೂಲ ಸೌಕರ್ಯ ಯೋಜನೆಗಳಿಗೆ ಅಗತ್ಯವಿರುವ ಜಲ್ಲಿಕಲ್ಲು, ಕಬ್ಬಿಣದ ಅದಿರು, ಮರಳು ದೊರೆಯದೆ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಅಭಿವೃದ್ಧಿ ಕಾರ್ಯ ಗಳಿಗೆ ಹಿನ್ನಡೆಯುಂಟಾಗುವಂತಾಗಿತ್ತು. ಅಲ್ಲದೇ ಬೇಸಗೆ ಸಮಯ ದಲ್ಲಿಯೇ ಹೆಚ್ಚಿನ ಕಾಮಗಾರಿಗಳು ನಡೆಯುವುದರಿಂದ ಈ ಸಮಯದಲ್ಲಿ ಕಚ್ಚಾ ವಸ್ತುಗಳ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡರೆ ಮುಂದಿನ ಆರು ತಿಂಗಳು ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.
ಸದ್ಯದ ಗಣಿ ಉದ್ಯಮದ ಪರಿಸ್ಥಿತಿಯನ್ನು ಅರಿತು ರಾಜ್ಯ ಸರಕಾರ ಪರವಾನಿಗೆ ಇಲ್ಲದೇ ಇರುವ ಗಣಿ ಉದ್ಯಮಗಳಿಗೂ ತತ್‌ಕ್ಷಣವೇ ಕಾರ್ಯಾರಂಭಿಸಲು ಅನುಮತಿ ನೀಡಿ, 90 ದಿನಗಳಲ್ಲಿ ಗಣಿ ಸುರಕ್ಷತ ಮಹಾನಿರ್ದೇಶನಾಲಯ (ಡಿಜಿಎಂಎಸ್)ದಿಂದ ಕಡ್ಡಾಯವಾಗಿ ಅನು ಮತಿ ಪಡೆಯುವಂತೆ ಸರಕಾರ ಸೂಚಿಸಿದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಯಿಂದ ಪ್ರಕೃತಿ ಸಂಪತ್ತು ಹಾಗೂ ಅರಣ್ಯ ಸಂಪತ್ತು ನಿರಂತರ ನಾಶವಾಗುತ್ತಿರುವುದು ನಡೆಯುತ್ತಲೇ ಇದೆ. ರಾಜ್ಯದಲ್ಲಿರುವ ಸುಮಾರು 2500 ಗಣಿ ಕಂಪೆನಿಗಳಲ್ಲಿ ಶೇ.90 ರಷ್ಟು ಗಣಿ ಕಂಪೆನಿಗಳು ಪರವಾನಿಗೆಯನ್ನೇ ಪಡೆ ಯದೇ ಗಣಿಗಾರಿಕೆಯನ್ನು ನಡೆಸುತ್ತಿರುವುದು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.
ರಾಜ್ಯದಲ್ಲಿ ಗಣಿಗಾರಿಕೆಯಿಂದ ಅನಾಹುತವಾದಾಗ ಮಾತ್ರ ಅಕ್ರಮ ಗಣಿಗಾರಿಕೆಯ ವಿಷಯ ಬೆಳಕಿಗೆ ಬಂದು ಮತ್ತೆ ತೆರೆಗೆ ಸರಿಯುವುದು ಸಾಮಾನ್ಯವಾಗಿದೆ. ಇದಕ್ಕೆ ಗಣಿಗಾರಿಕೆಯಲ್ಲಿ ತೊಡಗಿಕೊಂಡವರಿಗೆ ರಾಜಕೀಯ ಹಿನ್ನೆಲೆ ಅಥವಾ ರಾಜಕೀಯ ಪ್ರಭಾವ ಇರುವುದೇ ಪ್ರಮುಖ ಕಾರಣ ಎನ್ನುವುದು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಈಗ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇಲಾಖೆಗೆ ಕಾಯಕಲ್ಪ ಕಲ್ಪಿಸಲು ಹಾಗೂ ಮರಳು ಮತ್ತು ಜಲ್ಲಿಕಲ್ಲು ಸಾಮಾನ್ಯ ಬಡವರಿಗೂ ಕಡಿಮೆ ದರದಲ್ಲಿ ದೊರೆಯುವಂತೆ ಮಾಡುವುದಾಗಿ ಹೇಳುತ್ತಿದ್ದಾರೆ.
ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಗಣಿ ಕಂಪೆನಿಗಳು ಸರಕಾರ ನಿಗದಿ ಪಡೆಸಿದ 90 ದಿನಗಳಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆಯದಿದ್ದರೆ, ಅಂತಹ ಗಣಿ ಕಂಪೆನಿಗಳನ್ನು ಎಷ್ಟೇ ರಾಜಕೀಯ ಒತ್ತಡ ಇದ್ದರೂ, ಸ್ಥಗಿತಗೊಳಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ಅನಿವಾ ರ್ಯತೆಯ ಹೆಸರಿನಲ್ಲಿ ಅಕ್ರಮವನ್ನು ಪೊಷಿಸುವುದು ಸರಕಾರವೇ ಅಕ್ರ ಮಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಿಂದ ಮೇಲಿಂದ ಮೇಲೆ ಅನಾಹುತಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಅಕ್ರಮ ಗಣಿಗಾರಿಕೆಯಿಂದ ಅನಾಹುತಗಳು ನಡೆಯದಂತೆ ಹಾಗೂ ರಾಜ್ಯದ ಸಂಪತ್ತು ಅಕ್ರಮವಾಗಿ ಲೂಟಿಯಾಗದಂತೆ ತಡೆಯಲು ಗಣಿ ಇಲಾಖೆ ಇನ್ನಾದರೂ ಕಠಿನ ನಿಲುವು ತಾಳುವ ಅನಿವಾರ್ಯತೆ ಇದೆ.