ನವದೆಹಲಿ: ಜಿಲ್ಲಾ ಖನಿಜ ಫೌಂಡೇಷನ್‌ಗಳಿಗೆ (ಡಿಎಂಎಫ್), ತಮ್ಮ ಅದಿರು ವಹಿವಾಟಿನ ಶೇ. 10ರಷ್ಟು ಹಣವನ್ನು ರಾಯಧನದ ರೂಪದಲ್ಲಿ ನೀಡುವ ನಿಯಮವನ್ನು ರದ್ದುಗೊಳಿಸುವಂತೆ ಕೋರಿ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿನ ಗಣಿಗಾರಿಕೆ ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮೂರೂ ಜಿಲ್ಲೆಗಳ ಗಣಿಗಾರಿಕೆ ಸಂಸ್ಥೆಗಳು ಭಾರತೀಯ ಗಣಿಗಾರಿಕೆ ಉದ್ಯಮದ (ಫಿಮಿ) ದಕ್ಷಿಣ ಭಾರತ ಶಾಖೆಯ ಮೂಲಕ ಸಲ್ಲಿಸಲಾಗಿದ್ದ ಈ ಮನವಿಯಲ್ಲಿ, ಈಗಾಗಲೇ ಡಿಎಂಎಫ್ಗಳಿಗೆ ತಮ್ಮಿಂದ ಸುಮಾರು 15,000 ಕೋಟಿ ರೂ. ಹಣ ಸಂದಾಯವಾಗಿದೆ. ಹಾಗಿದ್ದರೂ, ಈಗ ಪುನಃ ಡಿಎಂಎಫ್ಗಳಿಗೆ, ತಮ್ಮ ವಹಿವಾಟಿನ ಶೇ. 10ರಷ್ಟು ಹಣವನ್ನು ಠೇವಣಿ ಇಡುವಂತೆ ಕೇಳಿರುವುದು ಆತಂಕ ತಂದಿದೆ ಎಂದು ಅಲವತ್ತುಕೊಂಡಿದ್ದವು.
ಈ ಮನವಿಯನ್ನು ಆಲಿಸಿದ ನ್ಯಾ. ರಂಜನ್ ಗೊಗೊಯ್, ಎ.ಎಂ. ಸಪ್ರ ಹಾಗೂ ನವೀನ್ ಸಿನ್ಹಾ ಅವರುಳ್ಳ ನ್ಯಾಯಪೀಠ, ಕಂಪನಿಗಳಿಂದ ವಸೂಲಿ ಮಾಡಲಾಗಿರುವ 15,000 ಕೋಟಿ ರೂ. ಹಣದ ಸದ್ಬಳಕೆ ಕುರಿತಂತೆ 6 ತಿಂಗಳುಗಳಲ್ಲಿ ವರದಿ ನೀಡಬೇಕೆಂದು ಕರ್ನಾಟಕ ಗಣಿಗಾರಿಕೆ ಪ್ರದೇಶಗಳ ಪುನಶ್ಚೇತನ ಕಾರ್ಪೊರೇಷನ್ ಹಾಗೂ ರಾಜ್ಯ ಸರ್ಕಾರ ನೇಮಿಸಿರುವ ಸ್ಪೆಷಲ್ ಪರ್ಪಸ್ ವೆಹಿಕಲ್‌ಗೆ ಸೂಚಿಸಿತು.
ಕೆಎಂಇಆರ್‌ಸಿ ಹಾಗೂ ಎಸ್‌ಪಿವಿಗಳು ಸಲ್ಲಿಸುವ ವರದಿಯಲ್ಲಿ, ಗಣಿಗಾರಿಕೆ ಕಂಪನಿಗಳಿಂದ ಬಂದ ಹಣವನ್ನು ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರಿನ ಗಣಿಗಾರಿಕೆ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳಿಗಾಗಿ ಯಾವ ರೀತಿ ಖರ್ಚು ಮಾಡಲಾಗಿದೆ. ರೈಲ್ವೆ ಹಾಗೂ ಆರೋಗ್ಯ ಸೌಲಭ್ಯಗಳಿಗಾಗಿ ಯಾವ ರೀತಿ ಬಳಸಲಾಗಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿತು.ಕೆಎಂಆರ್‌ಸಿ ಹಾಗೂ ಎಸ್‌ಪಿವಿ ವರದಿ ನೀಡಿದ ನಂತರ, ಅಗತ್ಯವಿದ್ದಲ್ಲಿ ಮೇಲ್ಮನವಿಯನ್ನು ಪುನರ್ ಪರಿಶೀಲಿಸಲಾಗುತ್ತದೆ ಎಂದು ಫಿಮಿಗೆ ನ್ಯಾಯಪೀಠ ಆಶ್ವಾಸನೆ ನೀಡಿತು.