Advertisement

Ration Card ತಿದ್ದುಪಡಿಗೆ ಕನಿಷ್ಠ ಕಾಲಾವಕಾಶ ; ಸೇವಾ ಕೇಂದ್ರಗಳಲ್ಲಿ ದಟ್ಟಣೆ

04:21 PM Aug 20, 2023 | Team Udayavani |

ಬಜಪೆ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಆ. 21ರ ವರೆಗೆ ಮಾತ್ರ ಅವಕಾಶ ನೀಡಿದೆ. ಆದರೆ ಸರ್ವರ್‌ ಡೌನ್‌ ಮತ್ತು ಇತರ ಸಮಸ್ಯೆಗಳ ಕಾರಣ ಈ ಸೀಮಿತ ಅವಧಿ ಎಷ್ಟಕ್ಕೂ ಸಾಲದು; ಇನ್ನೂ ಕೆಲವು ದಿನಗಳ ಕಾಲ ವಿಸ್ತರಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

Advertisement

ಅರ್ಜಿ ಸಲ್ಲಿಸಲು ಆ. 18ರಿಂದ 21ರ ವರೆಗೆಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಅವಕಾಶವನ್ನು ಎಲ್ಲ ಸೇವಾ ಕೇಂದ್ರದಲ್ಲಿ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ ಬಿಪಿಎಲ್‌ ಕಾರ್ಡಿನಲ್ಲಿ ಹೆಸರು ಸೇರ್ಪಡೆ, ಪಡಿತರ ಚೀಟಿಯಲ್ಲಿ ಸೇರ್ಪಡೆ/ ತೆಗೆದು ಹಾಕುವುದು, ರೇಷನ್‌ಅಂಗಡಿ ಬದಲಾವಣೆ, ಹೆಸರು ತಿದ್ದುಪಡಿ, ಭಾವಚಿತ್ರ ಬದಲಾವಣೆಗೆ ಇಲ್ಲಿ ಅವಕಾಶವಿದೆ.

9 ತಿಂಗಳಿಂದ ಸೇವೆ ಇಲ್ಲ
ಮರಣಪ್ರಮಾಣ ಪತ್ರ ಇದ್ದರೆ ಪಡಿತರಚೀಟಿಯಿಂದ ಹೆಸರು ತೆಗೆಯುವ ಅವಕಾಶ ಮಾತ್ರ ಒಂದು ತಿಂಗಳಿನಿಂದ ಇತ್ತು. ಅದರ ಹೊರತು ಬೇರೆ ಯಾವುದೇ ತಿದ್ದುಪಡಿಗೆ 9 ತಿಂಗಳಿಂದ ಅವಕಾಶ ಇರಲಿಲ್ಲ. ವಿದ್ಯಾರ್ಥಿಗಳಿಗೆ ಸರಕಾರದ ಯಾವುದೇ ಸವಲತ್ತು ಸಿಗಬೇಕಾದರೆ ಬಿಪಿಎಲ್‌ ಪಡಿತರ ಚೀಟಿಯಲ್ಲಿ ಹೆಸರು ಇರಬೇಕು. ಹೆಸರು ಸೇರ್ಪಡೆಯಾಗದಿರುವ ಕಾರಣ ಹಲವರು ಸವಲತ್ತುಗಳಿಂದ ವಂಚಿತರಾಗಿದ್ದರು.

ಇಡೀ ದಿನ ಅವಕಾಶಕ್ಕೆ ಕೋರಿಕೆ
ಪ್ರಸ್ತುತ ಜನರು ಸೇವಾ ಕೇಂದ್ರಗಳತ್ತ ದೌಡಾಯಿಸುತ್ತಿದ್ದು, ಅಲ್ಲಿ ದಟ್ಟಣೆ ಕಂಡುಬಂದಿದೆ. ತಿದ್ದುಪಡಿಗೆ ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಮಾತ್ರ ಸಮಯ ನಿಗದಿಯಾಗಿದ್ದು, ಆಗ ಎಲ್ಲೆಡೆ ಆಹಾರ ಸೈಟ್‌ಗೆ ಲಾಗ್‌ಇನ್‌ ಆಗುವಾಗ ಸರ್ವರ್‌ ಬಿಸಿ ಎಂದು ಬರುತ್ತಿದೆ. ಇದರಿಂದ ಆ. 18ರಂದು ಪ್ರತೀ ಕೇಂದ್ರಗಳಲ್ಲಿ ತಲಾ ಐದಾರು ಮಂದಿಯ ಪಡಿತರ ಚೀಟಿಯ ತಿದ್ದುಪಡಿ ಮಾತ್ರ ಸಾಧ್ಯವಾಗಿದೆ. ಆ. 19 (ಶನಿವಾರ) ಯಾವುದೇ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಸೇವಾ ಕೇಂದ್ರದಲ್ಲಿ ಜನರು ಕಾದುಕಾದು ಸುಸ್ತಾಗಿದ್ದಾರೆ. ಇನ್ನು ಆ. 20 ರವಿವಾರ, ಆ. 21ರಂದು ನಾಗರ ಪಂಚಮಿಯಾಗಿರುವ ಕಾರಣ ಹೆಚ್ಚಿನ ಜನರು ಹಬ್ಬದಲ್ಲಿ ಭಾಗಿಯಾಗಿರುತ್ತಾರೆ. ಅಷ್ಟರಲ್ಲಿ ತಿದ್ದುಪಡಿಗೆ ನೀಡಿರುವ ಕಾಲಾವಕಾಶ ಮುಗಿದುಹೋಗುತ್ತದೆ. ಆದ್ದರಿಂದ ಅಂತಿಮ ದಿನಾಂಕವನ್ನು ವಿಸ್ತರಿಸುವುದಲ್ಲದೆ ತಿದ್ದುಪಡಿಗೆ ಬೆಳಗ್ಗೆ 10ರಿಂದ ಸಂಜೆ 6ರತನಕ ಅವಕಾಶ ನೀಡಬೇಕು. ಹಾಗೆ ಮಾಡಿದರೆ ಸರ್ವರ್‌ ಬಿಸಿ ಎನ್ನುವ ಸಮಸ್ಯೆಯಾಗಲೀ ಜನರು ಕಾದುನಿಲ್ಲುವ ಪ್ರಮೇಯವಾಗಲೀ ಬಾರದು. ಇಲಾಖೆ ಇತ್ತ ಗಮನ ಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಜನರ ಸಮಸ್ಯೆ ಕುರಿತು ನಿನ್ನೆ ಸಭೆಯಲ್ಲಿ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ. ಸರ್ವರ್‌ ಸಮಸ್ಯೆ ಇರುವುದು ಹಾಗೂ ಸಾಕಷ್ಟು ಕಾಲಾವಕಾಶ ಇಲ್ಲದಿರುವ ವಿಚಾರ ಅಧಿಕಾರಿಗಳಿಗೆ ತಿಳಿದಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಇಲಾಖೆ ಹಿರಿಯ ಅಧಿಕಾರಿಗಳು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
– ಹೇಮಲತಾ,
ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next