Advertisement

ಪಂಚಾಯತ್‌ ಅಧ್ಯಕ್ಷರಿಗೂ ಕನಿಷ್ಠ ವಿದ್ಯಾರ್ಹತೆ ನಿಗದಿ?

06:05 AM Nov 28, 2017 | Harsha Rao |

ಹೊಸದಿಲ್ಲಿ: ದೇಶದಲ್ಲಿರುವ ಎಲ್ಲ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರಾಗುವವರಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡುವ ಸಂಬಂಧ ಮತ್ತೆ ಚರ್ಚೆ ಶುರುವಾಗಿದೆ.

Advertisement

ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಸ್ಥಳೀಯ ಪಂಚಾಯತ್‌ಗಳಿಗೆ ಆಯ್ಕೆಯಾಗಿರುವ ಮಹಿಳಾ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದರು. ಈಗಾಗಲೇ ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳಲ್ಲಿ ಕನಿಷ್ಠ ವಿದ್ಯಾರ್ಹತೆ ನಿಯಮ ಜಾರಿಯಲ್ಲಿದ್ದು, ಇದೇ ಮಾದರಿಯನ್ನು ಇತರ ರಾಜ್ಯಗಳಲ್ಲಿಯೂ ತರುವಂತೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.

ರಾಜಸ್ಥಾನ ಮತ್ತು ಹರಿಯಾಣ ರಾಜ್ಯ ಸರಕಾರಗಳು ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ತಂದು ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದರೆ ಇಂತಿಷ್ಟೇ ಅಥವಾ ಕನಿಷ್ಠ ವಿದ್ಯಾರ್ಹತೆ ಇರಬೇಕು ಎಂಬ ನಿಯಮ ಮಾಡಿದೆ. ಈ ಸರಕಾರಗಳ ಕೆಲಸ ಶ್ಲಾಘನೀಯವಾದದ್ದು. ಅಲ್ಲಿಯೂ ಆರಂಭದಲ್ಲಿ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಅನಂತರದಲ್ಲಿ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಮೇನಕಾ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ ಸರಕಾರದ ತಿದ್ದುಪಡಿ ಕಾಯ್ದೆಯಂತೆ ಜಿಲ್ಲಾ ಪಂಚಾಯತ್‌ ಮತ್ತು ಪಂಚಾಯತ್‌ ಸಮಿತಿ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದರೆ ಪುರುಷರು 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿರಲೇ ಬೇಕು. ಅಲ್ಲದೆ ಗ್ರಾ. ಪಂ. ಅಧ್ಯಕ್ಷರಾಗಿ ನೇಮಕ ವಾಗಬೇಕಾದರೆ 8ನೇ ತರಗತಿ ಮುಗಿಸಿರಬೇಕು ಎಂಬ ನಿಯಮವಿದೆ. ಹರಿಯಾಣ ಕೂಡ ಇದೇ ಮಾದರಿಯ ನಿಯಮ ಜಾರಿ ಮಾಡಿದ್ದು, ಇಲ್ಲಿ ಸ್ಥಳೀಯ ಪಂಚಾಯತ್‌ ಚುನಾವಣೆಗಳಲ್ಲಿ ಸ್ಪರ್ಧಿಸ ಬೇಕಾದರೆ 10ನೇ ತರಗತಿ ಮುಗಿಸಿರಲೇಬೇಕು. ಆದರೆ ಪರಿಶಿಷ್ಟ ಜಾತಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ಇದ್ದು ಇವರು 8ನೇ ತರಗತಿ ಮುಗಿಸಿರಬೇಕು ಎಂಬ ನಿಯಮವಿದೆ.  ಇದಷ್ಟೇ ಅಲ್ಲ, ಈ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸಬೇಕಾದರೆ ಅವರ ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಹೊಂದಿರಲೇಬೇಕು ಎಂಬ ನಿಯಮವೂ ಜಾರಿಯಲ್ಲಿದೆ.

ಸುಪ್ರೀಂನಲ್ಲಿ ಗೆಲುವು: ರಾಜಸ್ಥಾನ ಮತ್ತು ಹರಿಯಾಣ ಸರಕಾರದ ಈ ನಿರ್ಧಾರವನ್ನು ವಿರೋಧಿಸಿ ಕೆಲವು ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್‌ ಇವರ ಅರ್ಜಿಯನ್ನು ತಿರಸ್ಕರಿಸಿ, ಈ ರಾಜ್ಯಗಳ ನಿರ್ಧಾರವನ್ನು ಎತ್ತಿ ಹಿಡಿದಿತ್ತು. 

Advertisement

ಈ ಸರಕಾರಗಳ ಕನಿಷ್ಠ ವಿದ್ಯಾರ್ಹತೆ ನಿಯಮ ದಿಂದಾಗಿ ಬಡವರು, ಶೋಷಿತರು ಚುನಾವಣೆಗಳಲ್ಲಿ ಸ್ಪರ್ಧಿಸುವುದು ಅಸಾಧ್ಯವಾದಂಥ ಸ್ಥಿತಿ ನಿರ್ಮಾಣ ವಾಗುತ್ತದೆ ಎಂದು ಆರೋಪಿಸಿದ್ದರು. ಆದರೆ ಆಗ ವಿಚಾರಣೆ ನಡೆಸಿದ್ದ ನ್ಯಾ| ಚಲಮೇಶ್ವರ ಮತ್ತು ನ್ಯಾ| ಅಭಯ ಮನೋಹರ್‌ ಸಪ್ರ ಅವರು ಹರಿಯಾಣದ ಈ ನಿರ್ಧಾರದಿಂದಾಗಿ ಎರಡು ವರ್ಗದ ರೀತಿಯ ಜನ ಸೃಷ್ಟಿಯಾಗುತ್ತಾರೆ ಎಂಬುದನ್ನು ಒಪ್ಪಿಕೊಂಡಿ ದ್ದರು. ಅಂದರೆ, ಕಲಿತವರು ಮತ್ತು ಕಲಿಯದವರು ಎಂಬ ವರ್ಗೀಕರಣ ಸೃಷ್ಟಿಯಾಗುತ್ತದೆ ಎಂದಿದ್ದರು. ಆದರೆ ತೀರ್ಪು ನೀಡಿದ್ದ ನ್ಯಾ| ಚಲಮೇಶ್ವರ ಅವರು, ರಾಜ್ಯವೊಂದು ಕನಿಷ್ಠ ವಿದ್ಯಾರ್ಹತೆ ಪಡೆದವರಷ್ಟೇ ಚುನಾವಣೆಯಲ್ಲಿ  ಸ್ಪರ್ಧಿಸಬಹುದು ಎಂಬ ನಿಯಮ ರೂಪಿಸಿದಾಗ ಅದನ್ನು ಒಪ್ಪಿಕೊಳ್ಳೋಣ. ಏಕೆಂದರೆ, ಶಿಕ್ಷಿತ ಜನಪ್ರತಿ ನಿಧಿಗಳು ಬಂದರೆ, ಪಂಚಾಯತ್‌ ರಾಜ್‌ನ ಕರ್ತವ್ಯಗಳನ್ನು ಉತ್ತಮವಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಿದ್ದರು. ಅಲ್ಲದೆ ಯಾವುದು ಒಳ್ಳೆಯದು ಮತ್ತು ಕೆಟ್ಟದ್ದು ಅಥವಾ ತಪ್ಪು ಮತ್ತು ಸರಿ ಎಂಬುದನ್ನು ಶಿಕ್ಷಣದಿಂದಲೇ ಗೊತ್ತಾಗಲು ಸಾಧ್ಯ ಎಂದಿದ್ದರು.

ಕರ್ನಾಟಕದಲ್ಲಿ  ತೀವ್ರ ವಿರೋಧ
ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಈ ತಿದ್ದುಪಡಿ ಕಾಯ್ದೆ ರೂಪುಗೊಂಡಿದ್ದು 2015ರಲ್ಲಿ. ಆಗಲೇ ರಾಜ್ಯದಲ್ಲೂ ಇಂಥ ದ್ದೊಂದು ಚರ್ಚೆ ಶುರುವಾಗಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಇಂಥ ನಿರ್ಧಾರಗಳನ್ನು ಸ್ಥಳೀಯ ಪಂಚಾಯತ್‌ಗಳ ಮಟ್ಟದಲ್ಲೇ ಏಕೆ ತರಬೇಕು? ಮೊದಲು ದೊಡ್ಡ ದೊಡ್ಡ ನಿರ್ಧಾರಗಳನ್ನು ಮಾಡುವ ಸಂಸತ್‌ ಮತ್ತು ವಿಧಾನಸಭೆಗೆ ತರಬೇಕು. ಅದರಲ್ಲೂ ಸಂಸದರಿಗೆ ಕನಿಷ್ಠ ವಿದ್ಯಾರ್ಹತೆ ಮಾನದಂಡ ರೂಪಿಸಬೇಕು. ಇವರಿಗೆ ಇಂಥ ನಿಯಮವಿಲ್ಲವೆಂದಾದ ಮೇಲೆ ಸ್ಥಳೀಯ ಮಟ್ಟದ ಸರಕಾರಗಳಲ್ಲಿ ಏಕೆ ಇರಬೇಕು ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ ನಿಯಮ ರೂಪಿಸಿದವರಿಗೆ ಗ್ರಾಮೀಣ ಭಾರತದ ಪರಿಚಯವೇ ಇಲ್ಲ ಎಂದೂ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next