Advertisement

ಶಿಥಿಲಗೊಂಡ ಕಾರ್ಕಳದ ಮಿನಿ ವಿಧಾನಸೌಧ ಕಟ್ಟಡ

09:07 PM Nov 22, 2020 | mahesh |

ಕಾರ್ಕಳ: ನಗರದ ಬಂಡಿಮಠದಿಂದ ಬೈಪಾಸ್‌ ರಸ್ತೆಗೆ ತೆರಳುವಲ್ಲಿ ತಾಲೂಕು ಕಚೇರಿಯಿರುವ ಮಿನಿ ವಿಧಾನಸೌಧ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಅಧಿಕಾರಿಗಳು, ಸಿಬಂದಿ ಜೀವ ಬಿಗಿಹಿಡಿದುಕೊಂಡು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ತಲೆದೋರಿದೆ. ಜನರಿಗೂ ಅಪಾಯದ ಶಂಕೆ ಕಾಡಿದೆ.

Advertisement

ಮಿನಿ ವಿಧಾನಸೌಧ ಕಟ್ಟಡ ಮಳೆಗಾಲದಲ್ಲಿ ಸೋರು ತ್ತದೆ. ಗೋಡೆಗಳಲ್ಲಿ ನೀರು ಜಿನುಗುತ್ತದೆ. ಕಟ್ಟಡದ ಗೋಡೆ ಹಾಗೂ ಸ್ಲ್ಯಾಬ್‌ಗಳಿಗೆ ಹಾನಿಯಾಗಿದೆ. ಕಟ್ಟಡದ ಒಳಗಿನ ಹಲವು ಕೊಠಡಿಗಳ ಗೋಡೆಗಳು ಶಿಥಿಲಾವಸ್ಥೆ ಯಲ್ಲಿವೆ. ಮೇಲ್ಛಾವಣಿಯ ಕಾಂಕ್ರೀಟ್‌ ಸಿಮೆಂಟ್‌ ಕಿತ್ತು ಬಂದು ಚಕ್ಕೆಗಳು ಬೀಳುವಂತಿವೆ.

2004ರಲ್ಲಿ ನಿರ್ಮಾಣ
2004ರಲ್ಲಿ ದಿ| ಎಚ್‌ ಗೋಪಾಲ ಭಂಡಾರಿ ಶಾಸಕ ಹಾಗೂ ಡಿ.ಸಿ ಶ್ರೀಕಂಠಪ್ಪ ಸಂಸದರಾಗಿದ್ದ ಅವಧಿಯಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಇದು ನಿರ್ಮಾಣಗೊಂಡಿತ್ತು. ಅನಂತರದ ದಿನಗಳಲ್ಲಿ ಕಟ್ಟಡ‌ ಶಿಥಿಲಗೊಳ್ಳುತ್ತ ಬಂದಿದೆ.

24 ಸೇವೆಗಳ ಕೇಂದ್ರ ಸ್ಥಾನ
ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌, ಉಪ ತಹಶೀಲ್ದಾರ್‌, ಉಪ ನೋಂದಣಿ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ ಸೇರಿದಂತೆ ಒಟ್ಟು 24 ವಿವಿಧ ಸರಕಾರಿ ಸೇವೆಗಳ ವಿಭಾಗಗಳು ಕಾರ್ಯಾಚರಿಸುತ್ತಿವೆ.

ಮಳೆಗಾಲದಲ್ಲಿ ತ್ರಾಸದಾಯಕ
ಮಿನಿ ವಿಧಾನಸೌಧವಿರುವ ಆವರಣ ಸುಮಾರು 2 ಎಕರೆಗಿಂತ ವಿಸ್ತಾರವಾಗಿದೆ. ಕಾಂಪೌಂಡ್‌ ಒಳಗೆ ಕುಕ್ಕುಂದೂರು ಗ್ರಾಮಕರಣಿಕ ಕಚೇರಿಯೂ ಇದೆ. ಮಳೆಗಾಲದಲ್ಲಿ ಇಲ್ಲಿ ವೃದ್ಧರು, ಮಹಿಳೆಯರು ಅನುಭವಿಸುವ ಯಾತನೇ ಅಷ್ಟಿಷ್ಟಲ್ಲ. ಕಚೇರಿ ಸುತ್ತ ನೀರು ನಿಲ್ಲುವುದರಿಂದ ಕಚೇರಿ ತಲುಪಲು ಜಿಗಿಯುತ್ತ ಹೋಗಬೇಕಾದ್ದು ಇಲ್ಲಿ ಪ್ರತಿ ಮಳೆಗಾಲದ ದೃಶ್ಯ. ಸುತ್ತಲೂ ಮರಗಿಡಗಳು ಬೆಳೆದಿದ್ದು ಅವುಗಳ ತೆರವು ಕೂಡ ನಡೆದಿಲ್ಲ.

Advertisement

ಶೌಚಾಲಯ ದುರವಸ್ಥೆ
ಮಿನಿ ವಿಧಾನಸೌಧ ವ್ಯಾಪ್ತಿ¤ಯಲ್ಲಿ ಕಾರ್ಯಾ ಚರಿಸುತ್ತಿರುವ ಶೌಚಾಲಯ ಕೂಡ ದುರವಸ್ಥೆಯಿಂದ ಕೂಡಿದ್ದು, ಶುಚಿತ್ವದ ಕೊರತೆಯಿದೆ. ಅದರೊಳಗೆ ಪ್ರವೇಶಿಸಲು ಸಾರ್ವಜನಿಕರು ಹಿಂದೆ ಮುಂದೆ ನೋಡುವ ಸ್ಥಿತಿ ಇದೆ.

ದಾಖಲೆ ರಕ್ಷಣೆ ಸವಾಲು
ಶಿಥಿಲಗೊಂಡ ಕಟ್ಟಡದ ಒಳಗೆ ತಾಲೂಕಿನ ಕೃಷಿಕರ, ನಾಗರಿಕರ ಅತ್ಯಮೂಲ್ಯ ದಾಖಲೆ ಪತ್ರಗಳಿವೆ. ಪಹಣಿ, ಜಾತಿ ಆದಾಯ ಪ್ರಮಾಣ ಪತ್ರಗಳ ಜತೆಗೆ ಜಮೀನಿಗೆ ಸಂಬಂಧಿಸಿದ ಕಾಗದ ಪತ್ರ, ಕಡತಗಳಿವೆ. ಕಂಪ್ಯೂಟರ್‌ ಉಪಕರಣ, ನಮೂದು ಪುಸ್ತಕಗಳು, ದಾಖಲಾತಿಗಳು ಮಳೆಯ ತೇವಾಂಶಕ್ಕೆ ನಾಶವಾಗುವ ಸಾಧ್ಯತೆಗಳಿವೆ. ಇವುಗಳ ರಕ್ಷಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಗಮನಕ್ಕೆ ಬಂದಾಗಲೇ ಸ್ಪಂದಿಸಿದ್ದೇನೆ
ಮಿನಿ ವಿಧಾನಸೌಧ ಶಿಥಿಲಗೊಂಡು ಬಣ್ಣ ಕಳೆದುಕೊಂಡಿರುವುದು ನನ್ನ ಗಮನಕ್ಕೆ ಬಂದ ತತ್‌ಕ್ಷಣ ನವೀಕರಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಲು ಸಂಬಂಧಿಸಿದವರಿಗೆ ಸೂಚಿಸಿ 50 ಲ.ರೂ. ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ವಿ. ಸುನಿಲ್‌ ಕುಮಾರ್‌, ಶಾಸಕರು , ಕಾರ್ಕಳ

ಪ್ರಸ್ತಾವನೆ ಸಲ್ಲಿಸಲಾಗಿದೆ
ಮಿನಿ ವಿಧಾನಸೌಧ ಕಟ್ಟಡದ ಸ್ಥಿತಿಗತಿಗಳ ಬಗ್ಗೆ ಸರಕಾರಕ್ಕೆ ಅಂದಾಜು ಪಟ್ಟಿ ಸಲ್ಲಿಸಿ 50 ಲಕ್ಷ ರೂ. ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಕಟ್ಟಡ ದುರಸ್ತಿ, ಬಣ್ಣ ಎಲ್ಲವೂ ಅದರಲ್ಲಿ ಸೇರಿವೆ. ಅನುದಾನದ ನಿರೀಕ್ಷೆಯಲ್ಲಿದ್ದೇವೆ.
-ಪುರಂದರ ಹೆಗ್ಡೆ,, ತಾಲೂಕು ದಂಡಾಧಿಕಾರಿ, ಕಾರ್ಕಳ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next