Advertisement

ಶಿರ್ವ: ಮಿನಿ ಬಸ್‌ ಪಲ್ಟಿ ; ಓರ್ವ ಸಾವು

11:17 AM May 08, 2017 | Karthik A |

ಶಿರ್ವ: ಮದುವೆ ಸಮಾರಂಭದಲ್ಲಿ ಪಾಲ್ಗೊಂಡವರನ್ನು ಕರೆದುಕೊಂಡು ಮರಳುತ್ತಿದ್ದ ಮಿನಿ ಬಸ್‌ ರವಿವಾರ ಅಪರಾಹ್ನ ಶಿರ್ವ-ಬೆಳ್ಮಣ್‌ ಮುಖ್ಯ ರಸ್ತೆಯ ಪಿಲಾರುಕಾನ ಗುಂಡುಪಾದೆಯ ಬಳಿ ಪಲ್ಟಿಯಾಗಿ ಓರ್ವ ಯುವಕ ಮೃತಪಟ್ಟು ಮೂವರು ಗಂಭೀರಧಿವಾಗಿ ಗಾಯಗೊಂಡಿದ್ದಾರೆ. ಬಡಗು ಪಂಜಿಮಾರು ನಿವಾಸಿ ಸದಾಶಿವ ಮೂಲ್ಯ ಮತ್ತು ಜಯಂತಿ ಮೂಲ್ಯ ದಂಪತಿಯ ಪುತ್ರ ಸುನೀಲ್‌ ಮೂಲ್ಯ (22) ಮೃತಪಟ್ಟವರು.

Advertisement

ಘಟನೆಯ ವಿವರ
ಬೆಳ್ಮಣ್‌ನ ಹಾಲ್‌ನಲ್ಲಿ ವಿವಾಹ ಸಮಾರಂಭ ಮುಗಿಸಿಕೊಂಡು ಶಂಕರಪುರಕ್ಕೆ ಮರಳುತ್ತಿದ್ದ ವೇಳೆ ಮಿನಿ ಬಸ್‌ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಪಿಲಾರುಕಾನ ಗುಂಡುಪಾದೆ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತು. ಮಿನಿ ಬಸ್‌ನಡಿ ಸಿಲುಕಿದವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. 7-8 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಾವಿಗೀಡಾದ ಸುನಿಲ್‌ ಅವರ ದೊಡ್ಡಮ್ಮ ಜ್ಯೋತಿ (48), ಜ್ಯೋತಿ ಅವರ ಪುತ್ರ ಪ್ರಸನ್ನ (22), ಪ್ರವೀಣ್‌ (40), ಶೋಭಾ (38), ಸಂತೋಷ್‌ ಅವರಿಗೆ ಸ್ವಲ್ಪ ಹೆಚ್ಚಿನ ಏಟಾಗಿದೆ. ಇತರ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರೆಲ್ಲರೂ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಏಕೈಕ ಪುತ್ರ


ಅಪಘಾತದಲ್ಲಿ ಮೃತಪಟ್ಟಿರುವ ಸುನಿಲ್‌ ಅವರು ಸದಾಶಿವ – ಜಯಂತಿ ದಂಪತಿಯ ಏಕೈಕ ಪುತ್ರ. ಸದಾಶಿವ ಅವರು ಹುಬ್ಬಳ್ಳಿಯಲ್ಲಿ ಹೊಟೇಲ್‌ ವ್ಯವಹಾರ ನಡೆಸುತ್ತಿದ್ದು, ಸುನಿಲ್‌ ಅವರು ಪಿಯುಸಿವರೆಗಿನ ಶಿಕ್ಷಣವನ್ನು ಪಡೆದ ಬಳಿಕ ಡಿಪ್ಲೊಮಾವನ್ನು ಹುಬ್ಬಳ್ಳಿಯಲ್ಲಿಯೇ ಮಾಡಿದ್ದರು. ಅನಂತರ ಊರಿಗೆ ಬಂದು ಅಜ್ಜನ ಮನೆಯಲ್ಲಿದ್ದು ಉಡುಪಿ ನಗರದಲ್ಲಿ ಮೊಬೈಲ್‌ ಸರ್ವೀಸ್‌ ಅಂಗಡಿಯೊಂದರಲ್ಲಿ ಕೆಲವು ಸಮಯದಿಂದ ಕೆಲಸ ಮಾಡುತ್ತಿದ್ದರು. ಸುನಿಲ್‌ ಅವರ ತಂದೆ-ತಾಯಿ ಹುಬ್ಬಳ್ಳಿಯಲ್ಲಿದ್ದು, ಅವರಿಗೆ ಮಗ ಗಂಭೀರವಾಗಿರುವುದಾಗಿ ಮಾತ್ರ ತಿಳಿಸಲಾಗಿದೆ.

ರಸ್ತೆ ಬದಿಯಲ್ಲಿದ್ದವರ ರಕ್ಷಿಸುವ ಯತ್ನದಲ್ಲಿ…
ಅಪಘಾತ ನಡೆದ ಸ್ಥಳವು ಎರಡು ತಿರುವಿನ ನಡುವೆ ಇದ್ದು, ಈ ದಾರಿಯಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ದಂಪತಿ ತಮ್ಮ ಮಗುವಿಗೆ ಮೂತ್ರ ಮಾಡಿಸಲೆಂದು ನಿಂತಿದ್ದರು. ಇದೇ ಸಂದರ್ಭ ಅತಿಯಾದ ವೇಗದಲ್ಲಿ ಮಿನಿ ಬಸ್‌ ಧಾವಿಸಿ ಬರುತ್ತಿರುವುದನ್ನು ಗಮನಿಸಿ ಅವರು ಕೂಡಲೇ ಪಕ್ಕದ ಚರಂಡಿಗೆ  ಹಾರಿದ್ದರು. ಇದರಿಂದ ಅವರಿಗೆ ತರಚಿದ ಗಾಯಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next