ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್‌ಇ) ಹಾಗೂ ಐಸಿಎಸ್‌ಇ ಮಂಡಳಿಗಳು ಪ್ರಸಕ್ತ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ರದ್ದು ಮಾಡಿ, ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿವೆ. ಇದರ ಜತಗೆ ಸಿಬಿಎಸ್‌ಇಯು ವಿದ್ಯಾರ್ಥಿಗಳಿಗೆ ಇನ್ನೊಂದು ಆಯ್ಕೆಯನ್ನು ನೀಡಿದೆ. ಆಂತರಿಕ ಮೌಲ್ಯಮಾಪನದ ಫಲಿತಾಂಶದಲ್ಲಿ ತೃಪ್ತಿಕಾಣದ ವಿದ್ಯಾರ್ಥಿಗಳು ಕೊರೊನಾ ಪರಿಸ್ಥಿತಿ ತಹಬದಿಗೆ ಬಂದ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಹೀಗಾಗಿ 10ನೇ ತರಗತಿ ಮಕ್ಕಳಿಗೆ ಇರುವ ಗೊಂದಲವನ್ನು ಬಹುತೇಕ ಬಗೆಹರಿಸಿದೆ.
ರಾಜ್ಯ ಸರಕಾರ ಕೂಡ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸೆಸೆಲ್ಸಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಜೂನ್ 21ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭವಾಗಬೇಕಿತ್ತು. ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಿರುವುದರಿಂದ ಸದ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಆದರೆ, ತಜ್ಞರು ಈಗಾಗಲೇ ಮೂರನೇ ಅಲೆಯ ಆತಂಕವನ್ನು ಹೊರಹಾಕಿದ್ದಾರೆ. ಸದ್ಯ ಪರಿಸ್ಥಿತಿಯಲ್ಲಿ ಜುಲೈ ಅಂತ್ಯದ ವರೆಗೂ ಪರೀಕ್ಷೆ ನಡೆಸುವುದು ಅತ್ಯಂತ ಕಷ್ಟ. ಹೀಗಾಗಿ ಪರೀಕ್ಷೆಯ ಒತ್ತಡ ಮಕ್ಕಳಲ್ಲಿ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ಸಹಿತವಾಗಿ ಪಾಲಕ, ಪೋಷಕರಲ್ಲೂ ಮಾನಸಿಕ ಒತ್ತಡ ಹೆಚ್ಚಾಗಲಿದೆ.
ಕಳೆದ ವರ್ಷವೂ ಎಸೆಸೆಲ್ಸಿ ಪರೀಕ್ಷೆ ವಿಳಂಬವಾಗಿ ನಡೆದಿತ್ತು. ಈ ವರ್ಷದ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿರುವುದರಿಂದ ಸರಕಾರ ಎಸೆಸೆಲ್ಸಿ ಪರೀಕ್ಷೆ ವಿಚಾರವಾಗಿ ಸ್ಪಷ್ಟ ನಿಲುವು ಹೊಂದುವುದು ಅನಿವಾರ್ಯ ವಾಗಿದೆ. ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ (ಸಿಬಿಎಸ್‌ಇ ತೆಗೆದುಕೊಂಡಿರುವ ನಿರ್ದಾರದಂತೆ) ರಾಜ್ಯ ಪಠ್ಯಕ್ರಮದ ಎಸೆಸೆಲ್ಸಿ ವಿದ್ಯಾರ್ಥಿಗಳ ತೇರ್ಗಡೆ ಕಷ್ಟಸಾಧ್ಯ. ಸಿಬಿಎಸ್‌ಇ ತನ್ನ ಮಕ್ಕಳಿಗೆ ಆನ್ಲ„ನ್ ಮೂಲಕ ಸಮರ್ಪಕವಾಗಿ ಪಾಠ ಮಾಡಿದೆ. ಆದರೆ, ರಾಜ್ಯ ಪಠ್ಯಕ್ರಮದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಅಥವಾ ಆನ್ಲ„ನ್ ತರಗತಿ ಸರಿಯಾಗಿ ನಡೆದಿಲ್ಲ. ಅದರಲ್ಲೂ ಸರಕಾರಿ ಶಾಲಾ ಮಕ್ಕಳಿಗೆ ತರಗತಿಗಳು ಸಮರ್ಪಕವಾಗಿ ನಡೆದೇ ಇಲ್ಲ. ಹೀಗಾಗಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಕ್ತ ನಿರ್ಧಾರ ಪ್ರಕಟಿಸಬೇಕು. ಪರೀಕ್ಷೆ ಮುಂದೂಡುವುದರಿಂದ ಮಕ್ಕಳಲ್ಲಿ ಪರೀಕ್ಷಾ ಒತ್ತಡ, ಮಾನಸಿಕ ಯಾತನೆ ಕಡಿಮೆ ಮಾಡಲು ಸಾಧ್ಯವಿಲ್ಲ. ತೇರ್ಗಡೆಗೆ ಬೇಕಾದ ಉತ್ಕೃಷ್ಟ ಮಾರ್ಗದ ಶೋಧನೆ ಅತ್ಯವಶ್ಯಕ.
ಹಾಗೆಯೇ ಸದ್ಯ 9ನೇ ತರಗತಿ ತೇರ್ಗಡೆಯಾಗಿ 10ನೇ ತರಗತಿ (ಎಸೆಸೆಲ್ಸಿ) ಪ್ರವೇಶಿಸಲಿರುವ ವಿದ್ಯಾರ್ಥಿಗಳಿಗೂ ಆದಷ್ಟು ಬೇಗ ಪಠ್ಯ ಚಟುಚಟಿಕೆ ಆರಂಭಿಸಬೇಕು. ಕಾರಣ, ಈ ವಿದ್ಯಾರ್ಥಿಗಳು 8 ಮತ್ತು 9ನೇ ತರಗತಿಯಲ್ಲಿ ಮೌಲ್ಯಾಂಕನ ಪರೀಕ್ಷೆ ಇಲ್ಲದೆ ತೇರ್ಗಡೆಯಾಗಿದ್ದಾರೆ. ಎಸೆಸೆಲ್ಸಿ ತುಸು ಕಠಿನ ಎನಿಸಬಹುದು. ಹೀಗಾಗಿ ಈಗಿಂದಲೇ ಸಜ್ಜುಗೊಳಿಸುವ ಅಗತ್ಯವಿದೆ ಮತ್ತು ಈ ನಿಟ್ಟಿನಲ್ಲಿ ಸರಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇನ್ನು ಅತ್ತ ಸಿಬಿಎಸ್‌ಇ ದ್ವಿತೀಯ ಪರೀಕ್ಷಾ ರದ್ದು ವಿಚಾರದ ಬಗ್ಗೆಯೂ ಶುಕ್ರವಾರ ಕೆಲವೊಂದು ಗೊಂದಲಗಳೆದಿದ್ದವು. ಪರೀಕ್ಷಾ ಮಂಡಳಿ ಪರೀಕ್ಷೆಯನ್ನು ರದ್ದು ಮಾಡಿದೆ ಎಂಬ ಸುದ್ದಿಯಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕಡೆಗೆ ಸಿಬಿಎಸ್‌ಇ ಇಂಥ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿತು.