ಇತರರ ಮಿಮಿಕ್ರಿಯನ್ನು ಕೇಳಲು ತುಂಬಾ ಮಜಭರಿತವಾಗಿರುತ್ತೆ. ಅದರಲ್ಲೂ ಕಲಾವಿದರು ಮತ್ತು ರಾಜಕಾರಣಗಳ ಮಿಮಿಕ್ರಿಯಾದರೆ ನಗು ಉಕ್ಕುತ್ತದೆ. ಮಿಮಿಕ್ರಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವುದು ಮನುಷ್ಯರು ಮಾತ್ರವಲ್ಲ ಎಂದರೆ ಆಶ್ಚರ್ಯ ಆಗುತ್ತಲ್ವಾ?
ಮನುಷ್ಯನ ಧ್ವನಿಯಿಂದ ಹಿಡಿದು ತನ್ನ ಸುತ್ತಮುತ್ತಲಿನ ಎಲ್ಲಾ ಪ್ರಾಣಿಪಕ್ಷಿಗಳ ಧ್ವನಿಯನ್ನೂ ಅನುಕರಿಸುವ ಹಕ್ಕಿಯೊಂದು ನಮ್ಮ ನಡುವೆ ಇದೆ. ಅದರ ಹೆಸರು “ಲೈರ್’. ಈ ಲೈರ್ ಆಸ್ಟ್ರೇಲಿಯಾ ಮೂಲದ್ದು, ಮಿಮಿಕ್ರಿ ಮಾಡುವುದಕ್ಕೇ ಈ ಪ್ರಸಿದ್ಧಿ ಪಡೆದಿದೆ.
ಈ ಪಕ್ಷಿ ತಾನು ವಾಸಿಸುವ ಪ್ರದೇಶದಲ್ಲಿ ಕಂಡುಬರುವ ಇತರ ಪ್ರಾಣಿ- ಪಕ್ಷಿಗಳ ಶಬ್ದವನ್ನು ಸಲೀಸಾಗಿ ಅನುಕರಣೆ ಮಾಡುತ್ತದೆ. ಆ ಅನುಕರಣೆ ಎಷ್ಟು ಸ್ಪಷ್ಟವಾಗಿರುತ್ತದೆಯೆಂದರೆ, ಖುದ್ದು ಆ ಪ್ರಾಣಿ, ಪಕ್ಷಿಗಳೇ ಕೂಗಿದಂತಿರುತ್ತದೆ..! ಲೈರ್ ಹಕ್ಕಿಯು ಕೊಳಲಿನ ಧ್ವನಿಯನ್ನು ಹೊರಡಿಸಬಲ್ಲದು ಎಂಬ ಸಂಗತಿಯನ್ನು ಪಕ್ಷಿತಜ್ಞರು 1930ರಲ್ಲಿಯೇ ಗುರುತಿಸಿದ್ದರು.
ಲೈರ್ ಹಕ್ಕಿಗಳ ಬಾಲ ಪುರಾತನ ಗ್ರೀಕರ ತಂತಿವಾದ್ಯ “ಲಯರ್’ ಅನ್ನು ಹೋಲುವುದರಿಂದ ಇವುಗಳಿಗೆ “ಲೈರ್ ಹಕ್ಕಿ’ಗಳೆಂದು ಹೆಸರು ಬಂದಿದೆ. ಗಂಡು ಹಾಗೂ ಹೆಣ್ಣು ಲೈರ್ ಹಕ್ಕಿಗಳೆರಡರಲ್ಲಿಯೂ ಧ್ವನಿಯನ್ನು ಅನುಕರಿಸುವ ಸಾಮರ್ಥ್ಯದೆಯಾದರೂ, ಹೆಚ್ಚಾಗಿ ಕೇಳಿಬರುವ ಧ್ವನಿ ಗಂಡು ಲೈರ್ ಹಕ್ಕಿಯದು ಮಾತ್ರ.
ಮಿಮಿಕ್ರಿ ಹೇಗೆ ಸಾಧ್ಯ?: ಈ ವಿಶಿಷ್ಟ ಸಾಮರ್ಥ್ಯವನ್ನು ಲೈರ್ ಹಕ್ಕಿಗಳು ಪಡೆದದ್ದಾದರೂ ಹೇಗೆ? ಈ ಪ್ರಶ್ನೆಗೆ ಪಕ್ಷಿತಜ್ಞರು ಉತ್ತರ ಕಂಡುಕೊಳ್ಳಲು ಸತತ ಪ್ರಯತ್ನ ನಡೆಸಿ ಕೊನೆಗೆ ಯಶಸ್ವಿಯೂ ಆದರು. ನಮಗೆ ಧ್ವನಿಪೆಟ್ಟಿಗೆ ಇರುವಂತೆಯೇ ಪಕ್ಷಿಗಳಲ್ಲಿಯೂ “ಸಿರಿಂಕ್ಸ್’ ಎಂಬ ತಂತುಗಳಿಂದ ರಚನೆಯಾದ ಭಾಗರುತ್ತದೆ.
ಸಿರಿಂಕ್ಸ್ ರಚನೆ ಹಾಗೂ ಅದು ಪಕ್ಷಿಗಳಲ್ಲಿ ಇರುವ ಸ್ಥಾನದಿಂದಾಗಿ ಪಕ್ಷಿಗಳು ಸುಮಧುರವಾದ ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುತ್ತದೆ. ಆದರೆ ಲೈರ್ ಹಕ್ಕಿಗಳಲ್ಲಿ ಇರುವ ಸಿರಿಂಕ್ಸ್ ಅತೀ ಸಂಕೀರ್ಣವಾದ ಸ್ನಾಯುಗಳಿಂದ ಕೂಡಿದೆ. ಇದರಿಂದಲೇ ಅದಕ್ಕೆ ಇತರೆ ಪ್ರಾಣಿ-ಪಕ್ಷಿಗಳ ಧ್ವನಿಯನ್ನು ಲೀಲಾಜಾಲವಾಗಿ ಅನುಕರಿಸಲು ಸಾಧ್ಯವಾಗಿದೆ. ಕೆಲವೊಮ್ಮೆ ಲೈರ್ ಹಕ್ಕಿಯು ತನ್ನ ಮಿಮಿಕ್ರಿ ಕಲೆಯನ್ನು ಬಳಸಿ ಶತ್ರುಗಳಿಂದ ಪಾರಾಗುವುದೂ ಇದೆ.
ಅಳುವನ್ನೂ ಅನುಕರಿಸುತ್ತೆ: ಲೈರ್ ಹಕ್ಕಿ ಬಟ್ಟೆಗಿರಣಿ ಹೊಮ್ಮಿಸುವ ಶಬ್ದ, ಕಾರ್ ಇಂಜಿನ್ ಶಬ್ದ, ಕಾರಿನ ಹಾರ್ನ್, ಪಿಸ್ತೂಲಿನಿಂದ ಗುಂಡು ಹೊಡೆದಾಗ ಬರುವ ಶಬ್ದ, ನಾಯಿ ಬೊಗಳುವ ಶಬ್ದ, ಅಷ್ಟೇ ಯಾಕೆ ಚಿಕ್ಕ ಮಕ್ಕಳ ಅಳುವನ್ನು ಅನುಕರಿಸುವುದರ ಮೂಲಕ ನಿಮ್ಮನ್ನೂ ದಂಗು ಬಡಿಸಬಲ್ಲದು.
* ಪ.ನಾ.ಹಳ್ಳಿ ಹರೀಶ್ ಕುಮಾರ್