Advertisement
ಚಿತ್ರರಂಗ ಹಾಗೂ ರಾಜಕಾರಣ ಎರಡೂ ದೋಣಿಗಳಲ್ಲಿ ಪಯಣಿಸಿ ಇಹಲೋಕದ ಯಾತ್ರೆ ಮುಗಿಸಿದ ಕಲಿಯುಗದ ಕರ್ಣ ಬಿರುದಾಂಕಿತ ಅಂಬರೀಶ್ ಅವರ ಅಂತ್ಯಕ್ರಿಯೆ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡೇ ನೆರೆದಿತ್ತು.
Related Articles
Advertisement
ಖಾಕಿ ಕಣ್ಗಾವಲು: ಕಂಠೀರವ ಸ್ಟುಡಿಯೋ ಸುತ್ತಲೂ ಪೊಲೀಸ್ ಇಲಾಖೆ ಭದ್ರಕೋಟೆಯನ್ನೇ ನಿರ್ಮಿಸಿತ್ತು. ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್, ಪಿ. ಹರಿಶೇಖರನ್, ಡಿಸಿಪಿಗಳಾದ ಚೇತನ್‌ಸಿಂಗ್ ರಾಥೋಡ್, ಕಲಾ ಕೃಷ್ಣಮೂರ್ತಿ, ಗಿರೀಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಬಿಗಿ ಬಂದೋಬಸ್ತ್ ಉಸ್ತುವಾರಿ ಹೊತ್ತು ಪರಿಶೀಲನೆ ನಡೆಸುತ್ತಿದ್ದರು.
ಎಲ್ಲಿಯೂ, ಗದ್ದಲ, ಗಲಾಟೆಗಳಿಗೆ ಅವಕಾಶವಾಗದಂತೆ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಿದರು. ಅಂತ್ಯಕ್ರಿಯೆ ನಡೆದ ಸುತ್ತಮುತ್ತಲ ಭಾಗಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಜತೆಗೆ, ಡ್ರೋನ್ ಕ್ಯಾಮೆರಾ ಕೂಡ ಜನರ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು.
ಜತೆಗೆ, ಕೆಲ ಪೊಲೀಸ್ ಸಿಬ್ಬಂದಿ ಹ್ಯಾಂಡಿಕ್ಯಾಮ್‌ನಲ್ಲಿ ಜನಸಮೂಹ, ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಸ್ಟುಡಿಯೋ ಆವರಣದಲ್ಲಿ ಸಹಸ್ರಾರು ಮಂದಿ ಕಿರುಚಾಟ, ಘೋಷಣೆ ಕೂಗಿದಾಗ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ದೃಶ್ಯ ಸಾಮಾನ್ಯವಾಗಿತ್ತು.