Advertisement

ಪವಿತ್ರ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು!

12:30 AM Feb 05, 2019 | |

ಅಲಹಾಬಾದ್‌: ಸೋಮವಾರ ಮೌನಿ ಅಮಾವಾಸ್ಯೆಯಂದು ಕುಂಭ ಮೇಳದ ವೇಳೆ ಲಕ್ಷಾಂತರ ಭಕ್ತರು ಗಂಗಾಸ್ನಾನ ಮಾಡಿದ್ದಾರೆ.  ಒಟ್ಟು 50 ದಿನಗಳ ಕುಂಭಮೇಳದಲ್ಲಿ ನಡೆಯಲಿರುವ ಪವಿತ್ರ ಸ್ನಾನಗಳ ಪೈಕಿ ಇದು ಎರಡನೆ ಅತ್ಯಂತ ಮಹತ್ವದ ಸ್ನಾನವಾಗಿದೆ. ಈ ಬಾರಿ ಸೋಮವಾರವೇ ಈ ಮಾಘ ಅಮಾವಾಸ್ಯೆ ಇರುವುದು ಇನ್ನಷ್ಟು ಮಹತ್ವ ಪಡೆದಿತ್ತು. ಕುಂಭ ಮೇಳ ನಡೆಯುತ್ತಿರುವ 32 ಸಾವಿರ ಹೆಕ್ಟೇರ್‌ ಪ್ರದೇಶ ಕುಂಭನಗರಿಗೆ ಸೋಮವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

Advertisement

13 ಅಖಾರಾದ ಸಾಧುಗಳಿಂದ ಪುಣ್ಯಸ್ನಾನ: ಹರ ಹರ ಗಂಗೆ, ಗಂಗಾ ಮೈಯಾ ಕಿ ಜೈ ಎಂಬ ಉದ್ಘೋಷಗಳು ಇಲ್ಲಿ ಮೊಳಗಿದವು. 13 ಅಖಾರಾದ ನಾಗಾ ಸಾಧುಗಳು ಮೌನಿ ಅಮಾವಾಸ್ಯೆಯಂದು ಪುಣ್ಯಸ್ನಾನ ಮಾಡಿದ್ದಾರೆ.  ಪ್ರತಿ ಅಖಾರಕ್ಕೂ 30-40 ನಿಮಿಷಗಳನ್ನು ಮೀಸಲಿಡಲಾಗಿತ್ತು. ಸೋಮವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ, ವಿಶೇಷ ಭದ್ರತೆ ಆಯೋಜಿಸಲಾಗಿತ್ತು. 

ಕುಂಭಮೇಳದಲ್ಲಿ ಸೌಹಾರ್ದ: ಪ್ರಯಾಗ್‌ರಾಜ್‌ನಲ್ಲಿ ಕುಂಭ ಮೇಳದಂದು ಆಗಮಿಸುವ ಭಕ್ತರ ನೀರಿನ ದಾಹವನ್ನು ತಣಿಸಲು ಹಲವು ಮುಸ್ಲಿಮರೂ ನೆರವಾಗುತ್ತಿದ್ದುದು ವಿಶೇಷವಾಗಿದೆ. ಅದರಲ್ಲೂ ಮೌನಿ ಅಮಾವಾಸ್ಯೆಯಂದ ಸಂಗಮ ಘಾಟ್‌ನಲ್ಲಿ ಹಲವು ಮುಸ್ಲಿಮರು ಭಕ್ತರಿಗೆ ಶರಬತ್‌ ನೀಡುವ ಮೂಲಕ ನೀರಡಿಕೆ ಇಂಗಿಸುತ್ತಿದ್ದರು. ಇವರು ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದು, ಉಚಿತವಾಗಿ ನೀರು ಹಾಗೂ ಶರಬತ್‌ ನೀಡುತ್ತಿದ್ದಾರೆ.

ಮೌನಿ ಅಮಾವಾಸ್ಯೆಯ ವಿಶೇಷತೆ ಏನು?
ಮೌನಿ ಅಮಾವಾಸ್ಯೆಯನ್ನು ಮಾಘ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಪ್ರತಿ ಅಮಾವಾಸ್ಯೆಗೂ ಒಂದೊಂದು ವಿಶೇಷತೆ ಯನ್ನು ಹಿಂದೂ ನಂಬಿಕೆ ಹೊಂದಿದ್ದು, ಈ ಅಮಾವಾಸ್ಯೆಯಂದು ಮೌನವಾಗಿದ್ದು, ಮನಸಿನ ಹಿಡಿತ ಸಾಧಿಸಬೇಕು ಎಂದು ಸೂಚಿಸಲಾಗಿದೆ. ಹೀಗಾಗಿ ಮೌನಿ ಅಮಾವಾಸ್ಯೆ ಯಂದು ಮೌನವಾಗಿರಬೇಕು ಎಂದು ಹೇಳಲಾಗುತ್ತದೆ. ಈ ಬಾರಿ ಸೋಮವಾರವೇ ಈ ಅಮಾವಾಸ್ಯೆ ಬಂದಿರುವುದರಿಂದ ಇದು ಇನ್ನಷ್ಟು ವಿಶೇಷತೆ ಒಳಗೊಂಡಿದೆ. ಸೋಮವಾರ ಸಾಮಾನ್ಯ ಅಮಾವಾಸ್ಯೆಯನ್ನು ಸೋಮವತಿ ಅಮಾವಾಸ್ಯೆ ಎಂದು ಕರೆಯಲಾ ಗುತ್ತದೆ. ಹೀಗಾಗಿ ಈ ಬಾರಿ ಕುಂಭ ಮೇಳದ ವೇಳೆ ಮಾಘ ಮಾಸದ ಅಮಾವಾಸ್ಯೆಯ ಜೊತೆಗೆ, ಸೋಮವತಿ ಅಮಾವಾಸ್ಯೆಯೂ ಸೇರಿ ಅತ್ಯಂತ ಪವಿತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next