ಕೊಲಂಬೊ: ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ದ್ವೀಪರಾಷ್ಟ್ರದಿಂದ ಪರಾರಿಯಾದ ನಂತರ ಸರ್ಕಾರದ ವಿರೋಧಿ ಪ್ರತಿಭಟನಾಕಾರರಿಗೆ ರಾಜಪಕ್ಸೆಯ ನಿವಾಸದಲ್ಲಿ ದೊರೆತ ಕೋಟ್ಯಂತರ ರೂಪಾಯಿ ಹಣವನ್ನು ಶ್ರೀಲಂಕಾ ಪೊಲೀಸರು ಶನಿವಾರ (30) ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ:ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ: ಬೆಳ್ಳಿ ಗೆದ್ದ ಸಂಕೇತ್ ಸರ್ಗಾರ್
ಕಳೆದ ಮೂರು ವಾರಗಳಿಂದ ಪೊಲೀಸರು ಹಣವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ವಿಳಂಬ ಮಾಡಿದ್ದೇಕೆ, ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಾಧೀಶರಾದ ಥಿಲಿನಾ ಗಮೇಜ್ ಆದೇಶ ನೀಡಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.
ಜುಲೈ 9ರಂದು ಸೆಂಟ್ರಲ್ ಕೊಲಂಬೋದಲ್ಲಿನ ಬಿಗಿ ಭದ್ರತೆಯ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ನುಗ್ಗಿದ್ದರು. ಶ್ರೀಲಂಕಾ ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿದ್ದು, ಗೊಟಬಯ ರಾಜಪಕ್ಸ ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು.
ದೇಶದಲ್ಲಿ ಅರಾಜಕತೆ, ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜಪಕ್ಸೆ ಸೇನೆಯ ಆಶ್ರಯದಲ್ಲಿದ್ದು, ಜುಲೈ 13ರಂದು ಲಂಕಾದಿಂದ ಮಾಲ್ಡೀವ್ಸ್ ಗೆ ಪರಾರಿಯಾಗಿ ಬಳಿಕ ಅಲ್ಲಿಂದ ಸಿಂಗಾಪುರಕ್ಕೆ ತೆರಳಿದ್ದು, ಅಲ್ಲಿಂದಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಘಟನೆ ನಡೆದಿತ್ತು.
ಪ್ರತಿಭಟನಾಕಾರರು ರಾಜಪಕ್ಸೆ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಮನೆಯೊಳಗೆ 18 ಮಿಲುನ್ (ಅಂದಾಜು 2 ಕೋಟಿ ರೂಪಾಯಿ) ಹಣ ಸಿಕ್ಕಿತ್ತು. ಬಳಿಕ ಈ ಹಣವನ್ನು ಪ್ರತಿಭಟನಾಕಾರರು ಪೊಲೀಸರಿಗೆ ಹಸ್ತಾಂತರಿಸಿದ್ದರು.