ಮಾಗಡಿ: ಈ ಚಿತ್ರವನ್ನು ನೋಡಿದ್ರೆ ಯಾವುದೇ ಕೋಟೆಗೆ ಕಟ್ಟಿದ ಗೋಡೆ ರೀತಿ ಕಾಣುತ್ತದೆ.ಆದರೆ, ಇದು ಯಾವುದೋ ಗೋಡೆ ಅಲ್ಲ, ರಾಗಿ ಹುಲ್ಲಿನ ಬವಣೆ. 48 ಮಾರು ಉದ್ದ ಇದೆ.ಇತ್ತೀಚಿನ ದಿನಗಳಲ್ಲಿ ಇಷ್ಟು ಉದ್ದದ ಬವಣೆ ನೋಡಲು ಸಿಗುವುದು ಅಪರೂಪ.
ತಾಲೂಕಿನ ತಗ್ಗೀಕುಪ್ಪೆ ಗ್ರಾಮದ ರೈತ ಮಂಡಿರಂಗೇಗೌಡ ಈ ಬಣವೆಯ ಮಾಲಿಕರು. ಈ ಬಾರಿ ತಮ್ಮ 50 ಎಕರೆ ಜಮೀನಿನಲ್ಲಿ ಎಂ.ಆರ್. ತಳಿಯ ರಾಗಿ ಬಿತ್ತನೆ ಮಾಡಿದ್ದ ಇವರು, ಬೆಳೆಕಟಾವು ಮಾಡಿ ಅದನ್ನು ಮೆದೆ ಹಾಕಲು 450ಕ್ಕೂಹೆಚ್ಚು ಕೂಲಿ ಆಳುಗಳನ್ನು ಬಳಸಿಕೊಂಡಿದ್ದಾರೆ. ಕೇವಲ, ಬೆಳೆ ಕಟಾವು ಮಾಡಿ 25 ಮಾರುಉದ್ದದ 2 ಮೆದೆ ಹಾಕಲು ಮೂರೂವರೆ ಲಕ್ಷ ರೂ. ಖರ್ಚು ತಗುಲಿದೆ. ಸ್ಥಳೀಯವಾಗಿ ಕೂಲಿ ಯಾಳುಗಳು ಸಿಗದ ಕಾರಣ, ದೂರದ ರಾಯಚೂರಿನಿಂದ ಕರೆಯಿಸಿ ರಾಗಿ ಬೆಳೆ ಕಟಾವು ಮಾಡಿಸಿ, ಮೆದೆ ಹಾಕಿಸಿದ್ದಾಗಿ ಕೃಷ್ಣಮೂರ್ತಿ ವಿವರಿಸಿದರು.
ಇನ್ನು ಉಳುಮೆ, ಕಳೆ, ಕುಂಟೆ, ಗೊಬ್ಬರ ಎಲ್ಲವೂ ಲೆಕ್ಕಹಾಕಿದರೆ 10 ಲಕ್ಷ ರೂ. ಖರ್ಚು ಬರುತ್ತಿದೆ. ಸದ್ಯ 300 ರಿಂದ 350 ಬ್ಯಾಗ್ ರಾಗಿಬೆಳೆದಿದ್ದು, ಮಾರಾಟ ಮಾಡಿದ್ರೆ 8 ಲಕ್ಷ ರೂ. ಸಿಗಬಹುದು. ಇನ್ನು ಹುಲ್ಲಿಗೆ 1 ಲಕ್ಷ ರೂ.ಸಿಗಬಹುದು. ಇಲ್ಲಿ ಲಾಭ, ನಷ್ಟ ಲೆಕ್ಕ ಹಾಕುವುದಿಲ್ಲ, ಭೂಮಿ ತಾಯಿ ಸೇವೆಮಾಡಬೇಕೆಂಬುದೇ ನನ್ನ ಆಸೆ. ಲಾಭನಷ್ಟ ಎಲ್ಲವೂ ಭೂಮಿ ತಾಯಿಗೆ ಅರ್ಪಣೆ ಎನ್ನುತ್ತಾರೆ ರೈತ ಮಂಡಿ ರಂಗೇಗೌಡ.
ತಾಲೂಕಿನ ತಗ್ಗೀಕುಪ್ಪೆ ಗ್ರಾಮದ ಲೇ. ಮೋಟೇಗೌಡರ ಪುತ್ರ ಮಂಡಿ ರಂಗೇಗೌಡರಿಗೆಆರ್.ಪ್ರಕಾಶ್, ಚಂದ್ರಮೋಹನ್ ಇಬ್ಬರು ಪುತ್ರರು. ರಾಜಕೀಯವಾಗಿ ಹಾಗೂ ಉದ್ಯಮಿಯಾಗಿ ಬೆಳೆದಿದ್ದಾರೆ. ಬೇಸಾಯದಲ್ಲಿ ಲಾಭವಿಲ್ಲದಿದ್ದರೂ ತಂದೆಯ ಕೃಷಿ ಕಾರ್ಯಕ್ಕೆ ಸಾಥ್ ನೀಡುತ್ತಾರೆ. ಪಶುಪ್ರಿಯ ಮಂಡಿ ರಂಗೇಗೌಡ, ರಾಸುಗಳನ್ನು ದಷ್ಟಪುಷ್ಟವಾಗಿ ಸಾಕಿ, ಮಾಗಡಿರಂಗನಾಥಸ್ವಾಮಿ ಜಾತ್ರೆಯಲ್ಲಿ ಪ್ರದರ್ಶಿಸುವುದು ಇವರಿಗೆ ಹವ್ಯಾಸ ಆಗಿದೆ.
ತಾಲೂಕು ಗುಡ್ಡಗಾಡು ಪ್ರದೇಶ, ಇಲ್ಲಿನ ಪ್ರಮುಖ ಬೆಳೆ ರಾಗಿ, ಮಳೆ ಆಶ್ರಯದಿಂದಲೇ ರಾಗಿ, ಭತ್ತ ಹಾಗೂ ದ್ವಿದಳ ಧಾನ್ಯ ಬೆಳೆದು ಜನಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿಕೃಷಿ ಚಟುವಟಿಕೆಯಿಂದ ಯುವಕರು ವಿಮುಖವಾಗುತ್ತಿರುವುದು ನಿಜಕ್ಕೂ ನೋವಿನ ಸಂಗತಿ.ಆದರೆ, ರೈತ ಮಂಡಿ ರಂಗೇಗೌಡ ಮಾತ್ರವಂಶಪಾರಂಪರ್ಯವಾಗಿ ಬಂದಿರುವ ಬೇಸಾಯ ಬಿಟ್ಟಿಲ್ಲ. 80 ಎಕರೆ ಜಮೀನಿನಲ್ಲಿ 50 ಎಕರೆಯಲ್ಲಿ ರಾಗಿ, ಉಳಿದ ಪ್ರದೇಶದಲ್ಲಿ ತೆಂಗು, ಅಡಕೆ, ಮಾವು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
-ತಿರುಮಲೆ ಶ್ರೀನಿವಾಸ್