Advertisement

ಉತ್ತಮ ಮಳೆಗೆ ರಾಗಿ ಬೆಳೆ ಚೇತರಿಕೆ

09:57 PM Oct 08, 2019 | Lakshmi GovindaRaju |

ಹೊಸಕೋಟೆ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಗಿ ಬೆಳೆ ಪುನರ್ಜನ್ಮ ಪಡೆದಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ತಾಲೂಕಿನಲ್ಲಿ ಜನೇವರಿಯಿಂದ ಡಿಸೆಂಬರ್‌ವರೆಗೂ 782 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ 551 ಮಿ.ಮೀ. ನಿರೀಕ್ಷಿಸಿದ್ದು, 460 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಶೇ.18ರಷ್ಟು ಕೊರತೆಯಾಗಿದೆ.

Advertisement

ಆಗಸ್ಟ್‌ 15ರವರೆಗೆ ರೈತರು ರಾಗಿ ಭಿತ್ತನೆ ಮಾಡಿದ್ದು, ಮಧ್ಯದಲ್ಲಿ ಮಳೆಯ ತೀವ್ರ ಅಭಾವ ತಲೆದೋರಿದ್ದ ಕಾರಣ ಬೆಳೆ ಬಾಡುವ ಹಂತ ತಲುಪಿತ್ತು. ಇದೀಗ ಬೀಳುತ್ತಿರುವ ಮಳೆಯಿಂದಾಗಿ ರಾಗಿ ಬೆಳೆ ಗಣನೀಯ ಚೇತರಿಕೆ ಪಡೆದುಕೊಂಡು ಕೆಲವೆಡೆ ತೆನೆಗಳು ಕಂಡುಬರುತ್ತಿವೆ.

ರಾಗಿ ಬಿತ್ತನೆಗಾಗಿ ಸಜ್ಜುಗೊಳಿಸಿದ್ದ ಜಮೀನಿನಲ್ಲಿ ಕೆಲವು ರೈತರು ಪರ್ಯಾಯವಾಗಿ ಹುರುಳಿ ಭಿತ್ತನೆ ಮಾಡಿದ್ದು, ತಾಲೂಕಿನಾದ್ಯಂತ ಸುಮಾರು 14 ಸಾವಿರ ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತಿದ್ದು, ತಡವಾಗಿ ಮಳೆ ಪ್ರಾರಂಭಗೊಂಡ ಕಾರಣದಿಂದ ಶೇ.80ರಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ.

2018ರಲ್ಲೂ ಸಹ ತಾಲೂಕನ್ನು ಬರ ಪೀಡತ ಪ್ರದೇಶವೆಂದು ಘೋಷಿಸಿದ್ದು, ವೀಕ್ಷಣೆಗಾಗಿ ಕೇಂದ್ರ ತಂಡ ಬರುವ ಒಂದೆರಡು ದಿನಗಳ ಹಿಂದೆ ಮಳೆಯಾಗಿ ಸುಧಾರಣೆ ಕಂಡುಬಂದು ಅಧಿಕಾರಿಗಳು ಪೇಚಿಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. 2019ರಲ್ಲೂ ಸಹ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಹಾನಿಗೊಂಡ ಬೆಳೆಗೆ ಅನುಗುಣವಾಗಿ ರೈತರು ಪರಿಹಾರ ಪಡೆಯಲು ಸಾಧ್ಯವಾಗಲಿದೆ.

ಕೆರೆಗಳ ನೀರು ಸಂಗ್ರಹಣೆಯಲ್ಲೂ ಸುಧಾರಣೆ: ತಾಲೂಕಿನ ಬಹಳಷ್ಟು ಕೆರೆಗಳಲ್ಲಿ ನೀರು ಸಂಗ್ರಹಣೆ ಸುಧಾರಣೆಗೊಂಡಿದ್ದು, ಶೇ.60 ರಿಂದ 70ರಷ್ಟು ಭರ್ತಿಯಾಗಿವೆ. ಅನುಗೊಂಡನಹಳ್ಳಿ ಹೋಬಳಿಯ ಅರೆಹಳ್ಳಿ ಕೆರೆ ತುಂಬಿ ಕೋಡಿ ಹರಿಯುತ್ತಿದೆ.

Advertisement

ತಾಲೂಕಿನಲ್ಲಿ ಮುಂಗಾರಿನ ತೀವ್ರ ಕೊರತೆಯ ನಡುವೆಯೂ ಇದೀಗ ಸುರಿಯುತ್ತಿರುವ ಮಳೆಯಿಂದ ಶೇ.50 ರಿಂದ 60ರಷ್ಟು ರಾಗಿ ಫ‌ಸಲು ಪಡೆಯಲು ಸಾಧ್ಯವಾಗಲಿದೆ. ಸರ್ಕಾರ ಬರ ತಾಲೂಕು ಎಂದು ಘೋಷಿಸಿದ್ದು, ಬೆಳೆ ಹಾನಿ ಪರಿಹಾರವನ್ನು ಶೀಘ್ರವಾಗಿ ನೀಡಲು ಕ್ರಮ ಕೈಗೊಂಡಲ್ಲಿ ಮಾತ್ರ ರೈತರು ಸಂಕಷ್ಟದಿಂದ ಪಾರಾಗಲು ಸಾಧ್ಯ ಎನ್ನುತ್ತಾರೆ ಉಪ್ಪಾರಹಳ್ಳಿ ಗ್ರಾಮದ ರೈತ ಮುನಿಸ್ವಾಮಪ್ಪ.

ಸೆಪ್ಟೆಂಬರ್‌ನಲ್ಲಿ ದಾಖಲಾದ ಮಳೆ ಪ್ರಮಾಣ: ಕಸಬಾ 392 ಮಿ.ಮೀ., ಸೂಲಿಬೆಲೆ 397ಮಿ.ಮೀ., ಜಡಿಗೇನಹಳ್ಳಿ 395ಮಿ.ಮೀ., ನಂದಗುಡಿ 508ಮಿ.ಮೀ., ಅನುಗೊಂಡನಹಳ್ಳಿ 514 ಮಿ.ಮೀ ಮಳೆಯಾಗಿದ್ದು, ಸರಾಸರಿ 459.8 ಮಿ.ಮೀ. ಗಳಾಗಿದೆ.

ಅಕ್ಟೋಬರ್‌ನಲ್ಲಿ ದಾಖಲಾದ ಮಳೆ ಪ್ರಮಾಣ: ಕಸಬಾ 108.8 ಮಿ.ಮೀ., ಸೂಲಿಬೆಲೆ 108.0ಮಿ.ಮೀ., ಜಡಿಗೇನಹಳ್ಳಿ 123.2ಮಿ.ಮೀ., ಅನುಗೊಂಡನಹಳ್ಳಿ ಹೋಬಳಿಯಲ್ಲಿ 106.8 ಮಿ.ಮೀ. ದಾಖಲಾಗಿದ್ದು, ಅ.1ರಿಂದ ಸರಾಸರಿ 446.8 ಮಿ.ಮೀ ಮಳೆಯಾಗಿದೆ.

ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದಾರು ವಾಡಿಕೆಗಿಂತಲೂ ಕಡಿಮೆಯಾಗಿರುವ ಕಾರಣದಿಂದ ನಿರೀಕ್ಷಿತ ರಾಗಿ ಫ‌ಸಲು ಪಡೆಯಲು ಸಾಧ್ಯವಾಗುವುದಿಲ್ಲ. ಬರುವ ಬೆಳೆಯನ್ನು ರಕ್ಷಿಸಿಕೊಳ್ಳುವ ಬಗ್ಗೆ ರೈತರಿಗೆ ಕೃಷಿ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
-ನಾಗರಾಜ್‌, ತಾಲೂಕು ಕೃಷಿ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next