Advertisement

ಹಾಲು ಉತ್ಪಾದನೆ ತುಸು ಏರಿಕೆ, ಚರ್ಮಗಂಟು ಪ್ರಕರಣ ಶೂನ್ಯ

12:04 AM Apr 09, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ತೀವ್ರ ಕುಸಿತದ ಹಂತ ದಿಂದ ಮತ್ತೆ ಚೇತರಿಕೆ ಕಾಣಲಾರಂಭಿಸಿದೆ.

Advertisement

ಇನ್ನೊಂದೆಡೆ ದನಗಳ ಚರ್ಮಗಂಟು ರೋಗವೂ ಜಿಲ್ಲೆಯಲ್ಲಿ ಶೂನ್ಯ ಕ್ಕಿಳಿದಿರುವುದರಿಂದ ಹೈನುಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ಹಂತದಲ್ಲಿ ರಾಜ್ಯಾದ್ಯಂತ ಹಾಲು ಉತ್ಪಾದನೆ ಕೊರತೆ ಯಿಂದಾಗಿ ಮಂಡ್ಯ, ಹಾಸನ ಘಟಕದಿಂದಲೂ ಹಾಲು ಪೂರೈಕೆ ನಿಲ್ಲುವ ವರೆಗೆ ತಲುಪಿತ್ತು.

ಆದರೆ ಬಳಿಕ ಒಕ್ಕೂಟದ ಅಧ್ಯಕ್ಷರು ಈ ಕುರಿತು ಕೆಎಂಎಫ್‌ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪೂರೈಕೆ ನಿರಾತಂಕವಾಗಿ ಆಗತೊಡಗಿದೆ.

ಪ್ರಸ್ತುತ ದನಗಳು ಕರು ಹಾಕುವ ಕಾಲ ಇದಾಗಿದ್ದು, ಹಾಲು ಸಂಗ್ರಹದಲ್ಲಿ ಸರಾಸರಿ 3,000 ಲೀಟರ್‌ನಷ್ಟು ಏರಿಕೆ ಕಂಡುಬಂದಿದೆ, ಮುಂದೆ ಮಳೆಗಾಲ ಆರಂಭವಾಗುವಾಗ ಹಸುರು ಹುಲ್ಲು ಕೂಡ ಹೆಚ್ಚಾಗಲಿದ್ದು, ಆಗ ಮತ್ತಷ್ಟು ಹಾಲಿನ ಸಂಗ್ರಹ ಏರಬಹುದು ಎನ್ನು ವುದು ಒಕ್ಕೂಟದವರ ಲೆಕ್ಕಾಚಾರ.

ತುಪ್ಪ, ಬೆಣ್ಣೆ ಇಳಿಕೆ: ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಕುಂಠಿತವಾದ ಪರಿಣಾಮ ಹಾಲಿನ ಇತರ ಉತ್ಪನ್ನಗಳಲ್ಲೂ ಇಳಿಕೆಯಾಗಿದೆ. ಮುಖ್ಯವಾಗಿ ಅಧಿಕ ಕೊಬ್ಬಿ
ನಾಂಶವಿರುವ ಸಮೃದ್ಧಿ ಹಾಲು ಉತ್ಪಾದನೆಯೇ ನಿಂತು ಹೋಗಿದೆ. 8.5 ಕೊಬ್ಬಿನಾಂಶವಿರುವ ಈ ಹಾಲಿಗೆ ಉತ್ತಮ ಬೇಡಿಕೆ ಇದ್ದರೂ ಉತ್ಪಾದನೆ ಸಾಧ್ಯವಾಗುತ್ತಿಲ್ಲ, ಹಿಂದೆ ದಿನಕ್ಕೆ 5 ಸಾವಿರ ಲೀಟರ್‌ ಸಮೃದ್ಧಿ ಹಾಲು ಉತ್ಪಾದನೆಯಾಗುತ್ತಿತ್ತು. ಅಧಿಕ ಗುಣಮಟ್ಟದ ಹಾಲು ಇದ್ದಲ್ಲಿ ಮಾತ್ರ ಅದನ್ನು ಮತ್ತೆ ಆರಂಭಿಸಬಹುದು. ಇದರೊಂದಿಗೆ ಬೆಣ್ಣೆ ಮತ್ತು ತುಪ್ಪದ ಉತ್ಪಾದನೆಯೂ ಇಳಿಕೆಯಾಗಿದೆ.

Advertisement

ಯುವ ಹೈನುಗಾರರಿಗೆ ಪ್ರೋತ್ಸಾಹ: ಯುವ ಹೈನುಗಾರರನ್ನು ಗುರುತಿಸಿ ಅವರಿಗೆ ಹೈನುಗಾರಿಕಾ ಉತ್ತೇಜನ ಮಾಡುವ ಬಗ್ಗೆ ಒಕ್ಕೂಟ ಗಂಭೀರವಾಗಿ ಯೋಚಿಸುತ್ತಿದೆ ಎಂದು ಅಧ್ಯಕ್ಷ ಸುಚರಿತ ಶೆಟ್ಟಿ ಅವರು ತಿಳಿಸುತ್ತಾರೆ. ಹಸುರು ಹುಲ್ಲು ಬೆಳೆಯುವುದಕ್ಕೆ ಸದ್ಯ ಎಕರೆಗೆ 20 ಸಾವಿರ ರೂ. ನೀಡಲಾಗುತ್ತಿದ್ದು, ಇದನ್ನು 25 ಸಾವಿರ ರೂ.ಗೆ ಏರಿಸುವ ಬಗ್ಗೆ ಯೋಜನೆ ಇದೆ. ಅಲ್ಲದೆ ಹೆಚ್ಚು ದನ ಸಾಕುತ್ತಿದ್ದವರು, ಅದನ್ನು ಕಡಿಮೆ ಮಾಡಿದ್ದರೆ ಅಂತಹವರಿಗೆ ಮತ್ತೆ ಹೈನುಗಾರಿಕೆ ಹೆಚ್ಚಿಸುವ, ದನಗಳ ವೆಚ್ಚ ನೀಡುವ ಬಗ್ಗೆಯೂ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ಚರ್ಮ ಗಂಟು ರೋಗ ಜಿಲ್ಲೆಯಲ್ಲಿ ಶೂನ್ಯಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಕರು ಹಾಕಿದಾಗ ಹಸುಗಳು ನೀಡುವ ಹಾಲಿನ ಪ್ರಮಾಣ ಏರಿಕೆಯಾಗಲಿದೆ.
-ಡಾ| ಅರುಣ್‌ ಕುಮಾರ್‌ ಶೆಟ್ಟಿ, ಪಶು ಸಂಗೋಪನ ಇಲಾಖೆ ಉಪನಿರ್ದೇಶಕರು

ರಾಜ್ಯಾದ್ಯಂತ 1 ಲಕ್ಷ ಲೀಟರ್‌ ಸಂಗ್ರಹ ಹೆಚ್ಚಾಗಿದೆ. ನಮಗೆ ಹೊರ ಜಿಲ್ಲೆಗಳಿಂದ ಹಾಲು ಸಿಗುತ್ತಿದೆ. ಮುಂದೆ ಜಿಲ್ಲೆಯಲ್ಲಿ ಹೈನುಗಾರಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ.
– ಸುಚರಿತ ಶೆಟ್ಟಿ, ಅಧ್ಯಕ್ಷರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next